ಬೆಂಗಳೂರು,ಜ.16- ಆಪರೇಷನ್ ಕಮಲ ಭೀತಿ ಎದುರಿಸುತ್ತಿರುವ ಕಾಂಗ್ರೆಸ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಸರ್ಕಾರದ ಉಳಿವಿಗೆ ಸರಣಿ ಸಭೆಗಳನ್ನು ನಡೆಸುತ್ತಿದೆ.
ಬೆಳಗಿನಿಂದಲೇ ಕುಮಾರಕೃಪದಲ್ಲಿ ತಂಗಿರುವ ವೇಣುಗೋಪಾಲ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿ, ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ನಗರದ ತಾಜ್ ವೆಸ್ಟೆಂಡ್ ಹೊಟೇಲ್ನಲ್ಲಿ ಐಟಿ-ಬಿಟಿ ಇಲಾಖೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಪರಮೇಶ್ವರ್, ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದೇ ಹೊಟೇಲ್ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಂಗಿದ್ದು, ಅಲ್ಲಿಂದಲೇ ಮುಂದಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಇತ್ತ ಕುಮಾರಕೃಪದಲ್ಲಿ ಬಿಜೆಪಿ ತೆಕ್ಕೆಯಲ್ಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ ಸಿದ್ದಗೊಳಿಸಿ ಅವರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯವೂ ಚುರುಕುಗೊಂಂಡಿದೆ.
ಒಟ್ಟಾರೆ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಆಪರೇಷನ್ ಕಮಲ ವಿಫಲಗೊಳಿಸಲು ಪ್ರತಿತಂತ್ರ ಹೆಣೆಯಲಾಗುತ್ತಿದೆ.
ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್ ನಾಲ್ವರು ಹಿರಿಯ ಸಚಿವರಿಗೆ ಸಚಿವ ಸ್ಥಾನ ತ್ಯಾಗಕ್ಕೆ ನಿರ್ದೇಶನ ನೀಡಿದೆ ಎನ್ನಲಾಗುತ್ತಿದ್ದು, ಬಿಜೆಪಿ ತೆಕ್ಕೆಯಲ್ಲಿರುವ ಅತೃಪ್ತರ ಪೈಕಿ ನಾಲ್ವರಿಗೆ ಸಚಿವ ಸ್ಥಾನದ ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.