ಬೆಂಗಳೂರು, ಜ.16-ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ ಅವರು, ನಾವು ಈ ಹಿಂದೆ ಹಲವಾರು ರಾಜಕೀಯ ಏರಿಳಿತಗಳನ್ನು ನೋಡಿದ್ದೇವೆ. ಸಾಮಾನ್ಯವಾಗಿ 10-12 ಶಾಸಕರು ರೆಸಾರ್ಟ್ಗೆ ಹೋಗುತ್ತಿದ್ದರು.ಆದರೆ, ಬಿಜೆಪಿಯವರು ತನ್ನ 104 ಮಂದಿ ಶಾಸಕರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆಂದು ಕರೆದುಕೊಂಡು ಹೋಗಿ ಅಲ್ಲಿಂದ ಹರಿಯಾಣದ ರೆಸಾರ್ಟ್ಗೆ ಸ್ಥಳಾಂತರಿಸಿ ಕೂಡಿ ಹಾಕುವ ದುಸ್ಥಿತಿಗೆ ತಲುಪಿದ್ದಾರೆ.ಇದು ಅತ್ಯಂತ ನೋವಿನ ವಿಚಾರ ಎಂದರು.
ಬಿಜೆಪಿಯವರು ಕಾಂಗ್ರೆಸ್ ಮನೆಗೆ ಕೈ ಹಾಕದೇ ಇದ್ದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಯಾರೇ ಆದರೂ ಪಕ್ಕದ ಮನೆಗೆ ಕೈ ಹಾಕಿದಾಗ, ಪಕ್ಕದ ಮನೆಯವರು ಇವರ ಮನೆಗೆ ಕೈ ಹಾಕುವುದು ಸಾಮಾನ್ಯ.ಇಂತಹ ವಾತಾವರಣದಿಂದ ಬಿಜೆಪಿ 104 ಮಂದಿಯನ್ನು ರೆಸಾರ್ಟ್ನಲ್ಲಿ ಕೂಡಿ ಹಾಕುವ ದುರ್ಗತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ತಿಂಗಳು ಕಳೆದಿಲ್ಲ. ಅವರ ಆರೋಗ್ಯವೂ ಸರಿಯಿಲ್ಲ. ಯಡಿಯೂರಪ್ಪ ಅವರು ಹಿರಿಯ ನಾಯಕರು.ಮುಖ್ಯಮಂತ್ರಿಯಾಗಿದ್ದವರು.ವಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಅವರ ಬೆನ್ನು ತಟ್ಟಿ ಆಡಳಿತಾತ್ಮಕ ವಿಷಯಗಳತ್ತ ಗಮನ ಹರಿಸಿ ಎಂದು ಸಲಹೆ ನೀಡಬೇಕಿತ್ತು.ಅದನ್ನು ಬಿಟ್ಟು ಈ ವಯಸ್ಸಿನಲ್ಲಿ ಬಸ್ಸ್ಟ್ಯಾಂಡ್ ಲವ್ಗೆ ಕೈ ಹಾಕಿದ್ದಾರೆ.ಮದುವೆಯಾದ ಹುಡುಗಿಯಿಂದ ವಿಚ್ಚೇದನ ಕೊಡಿಸಿ ಮತ್ತೊಮ್ಮೆ ತಾಳಿ ಕಟ್ಟುವುದು ಕಷ್ಟದ ವಿಷಯ.ಬಿಜೆಪಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದನ್ನು ಇಲ್ಲಿ ಸಂಪಾದಿಸುವ ಪ್ರಯತ್ನ ಮಾಡಿದರೆ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.