ಲೋಕಸಭಾ ಚುನಾವಣೆಗೆ ಬಿಬಿಎಂಪಿಯಿಂದ ಸಕಲ ಸಿದ್ಧತೆ

ಬೆಂಗಳೂರು,ಜ.16-ಮುಂಬರುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

46,329,00 ರಷ್ಟು ಪುರುಷ ಮತದಾರರು, 42, 481,66ರಷ್ಟು ಮಹಿಳಾ ಮತದಾರರಿದ್ದು ಒಟ್ಟು 88, 810,66ರಷ್ಟು ಮತದಾರರು ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಅರ್ಹರಿರುತ್ತಾರೆ.

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವ ಕಾರ್ಯ ಮುಂದುವರೆಯಲಿದ್ದು ಹೊಸದಾಗಿ ಹೆಸರು ನೋಂದಾಯಿಸುವ ಮತದಾರರಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜರಾಜೇಶ್ವರಿ ನಗರ, ಯಶವಂತಪುರ ಸೇರಿದಂತೆ ಹಲವೆಡೆ ನಕಲಿ ಮತದಾರರಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 1,75,183 ನಕಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.
ರಾಜ ರಾಜೇಶ್ವರಿ ನಗರದಲ್ಲಿ 14,880 ಸೇರಿದಂತೆ ಮಹದೇವಪುರ, ಯಶವಂತಪುರ ಕ್ಷೇತ್ರಗಳಲ್ಲಿ ಅತಿ ಹೆಚ್ಚು ನಕಲಿ ಮತದಾರರನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ 67,670,20 ರಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದು, ಇವರಿಗೆ ಜ.25ರ ನಂತರ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಿದ್ದು, ಮತದಾರರು ಆನ್‍ಲೈನ್‍ನಲ್ಲಿ ತಮ್ಮ ಮಾಹಿತಿಗಳನ್ನು ಪರಿಶೀಲಿಸಬಹುದು ಎಂದು ಹೇಳಿದರು.

ಹೆಸರು, ವಯಸ್ಸು ಸೇರಿದಂತೆ ಇನ್ನಿತರ ಮಾಹಿತಿಗಳಲ್ಲಿ ಲೋಪದೋಷವಿದ್ದರೆ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆ ಸಲ್ಲಿಸಿ ಸರಿಪಡಿಸಿಕೊಳ್ಳುವಂತೆಯೂ ತಿಳಿಸಿದ್ದಾರೆ.

28 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಗೊಂದರಂತೆ ಒಟ್ಟು 8514 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ.ಅಷ್ಟೇ ಅಲ್ಲದೇ ನೂಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಈಗಾಗಲೇ ಇವಿಎಂಗಳ ಪ್ರಗತಿ ಪರಿಶೀಲನಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ.ಬೆಂಗಳೂರು ದಕ್ಷಿಣ ಕ್ಷೇತ್ರದ ಇವಿಎಂಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಕೇಂದ್ರ ಭಾಗದ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ