
ಬೆಂಗಳೂರು, ಜ.15-ರಾಜ್ಯದ ಜನರಿಗೆ ಟ್ವೀಟರ್‍ನಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದುರ್ಜನರ ಎಳ್ಳಿನ ಕಹಿಯನ್ನು ಸಜ್ಜನಿಕೆಯ ಬೆಲ್ಲದ ಸವಿಯಿಂದ ಎದುರಿಸೋಣ.ಸಂಕ್ರಮಣದ ಪರ್ವ ಕಾಲದಲ್ಲಿ ಸಮೃದ್ಧಿಯ ಕಡೆಗೆ ಹೆಜ್ಜೆ ಹಾಕೋಣ ಎಂದು ಹಾರೈಸಿದ್ದಾರೆ.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ.ಬಿಜೆಪಿ ಅಭದ್ರತೆಯಿಂದ ನರಳುತ್ತಿದೆ.ಅದಕ್ಕಾಗಿ ತಮ್ಮ ಶಾಸಕರುಗಳನ್ನು ದಿಗ್ಬಂಧನದಲ್ಲಿಟ್ಟು ಕಾಯುತ್ತಾ ಕುಳಿತಿದೆ ಎಂದು ಲೇವಡಿ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವ ಮೂಲಕ ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ಪರಿಶುದ್ಧ ನಿಷ್ಠೆ ತೋರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಪ್ರಧಾನಿಯವರ ಘೋಷಣೆಗಳು ನಿಮ್ಮ ವಾಸ್ತವತೆಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಹಾಗೇಯೇ ವಿಕಾಸ ಎಂಬುದು ರೆಸಾರ್ಟ್ ರಾಜಕಾರಣದಲ್ಲಿದೆಯೇ ಎಂದು ಅವರು ತಿರುಗೇಟು ನೀಡಿದ್ದಾರೆ.
ಮೊದಲು ನಿಮ್ಮ ನಿಷ್ಠೆಯನ್ನು ಜನರಿಗೆ ತೋರಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.