ಬೆಂಗಳೂರು, ಜ.15- ಸಂಕ್ರಾಂತಿ ಹಬ್ಬದ ನಂತರ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಿ ಸರ್ಕಾರ ರಚನೆ ಮಾಡಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಅಗತ್ಯ ಸಂಖ್ಯೆಯ ಅತೃಪ್ತ ಶಾಸಕರನ್ನು ಕ್ರೋಢೀಕರಿಸುವತ್ತ ಗಮನ ಹರಿಸಿದೆ.
ಮೂಲಗಳ ಪ್ರಕಾರ, ಈವರೆಗೂ ಕಾಂಗ್ರೆಸ್ನಿಂದ 9 ರಿಂದ 10 ಸಂಖ್ಯೆಯ ಶಾಸಕರು ಮಾತ್ರ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.ಇಷ್ಟು ಮಂದಿ ಬಂದರೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡಿರುವ ಕಮಲ ನಾಯಕರು ಬೇರೆ ಬೇರೆ ಶಾಸಕರನ್ನು ಸೆಳೆಯಲು ಕಾರ್ಯೋನ್ಮುಖರಾಗಿದ್ದಾರೆ.
ಮುಂಬೈನ ಮ್ಯಾರಿಟನ್ ಹೊಟೇಲ್ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದ ಆರು ಶಾಸಕರು ಬೀಡು ಬಿಟ್ಟಿದ್ದರೆ ದೆಹಲಿಯಲ್ಲಿ ಮೂವರು ಶಾಸಕರು, ಗುರುಗ್ರಾಮದಲ್ಲಿ ಓರ್ವ ಶಾಸಕರು ಇದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನಿಂದ ಕನಿಷ್ಟ 15 ಸಂಖ್ಯೆಯ ಶಾಸಕರು ಬಂದರೆ ಇಬ್ಬರು ಪಕ್ಷೇತರರ ಬೆಂಬಲ ಪಡೆದು ಸರ್ಕಾರವನ್ನು ಅಸ್ಥಿರಗೊಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.ಕೆಲವು ಭಿನ್ನಮತೀಯರನ್ನು ಬೇರೆ ಬೇರೆ ವ್ಯಕ್ತಿಗಳಿಂದ ಸಂಪರ್ಕಿಸುವ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ.
ಕೈ ಕೊಟ್ಟರೇ ಇಬ್ಬರು ಶಾಸಕರು..?: ಇಂದು ನಡೆದ ದಿಢೀರ್ ಬೆಳವಣಿಗೆಯಲ್ಲಿ ಬಳ್ಳಾರಿಯ ಕಂಪ್ಲಿ ಶಾಸಕ ಜೆ.ಗಣೇಶ್, ಹಗರಿ ಬೊಮ್ಮನಹಳ್ಳಿಯ ಭೀಮಾನಾಯಕ್ ರಾತ್ರೋರಾತ್ರಿ ಮುಂಬೈನತ್ತ ಪ್ರಯಾಣ ಮಾಡಿದ್ದಾರೆಂದು ತಿಳಿದುಬಂದಿದೆ.
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಜತೆ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ಈ ಇಬ್ಬರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್ಜಾದವ್ ಅವರಿಗೆ ಮುಂಬೈನ ಪ್ರತಿಷ್ಠಿತ ಹೊಟೇಲ್ವೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಟುಂಬ ಸಮೇತ ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಮುಂಬೈ ಅಥವಾ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಯಾವುದೇ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಕೈಗೆ ಸಿಗದಂತೆ ದೂರವಾಣಿ ಸಿಮ್ಗಳನ್ನು ಬದಲಾವಣೆ ಮಾಡಲಾಗಿದೆ.
ಗೋಕಾಕ್ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಹಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್ ಎಲ್ಲಿದ್ದಾರೆಂಬುದು ಯಾರಿಗೂ ತಿಳಿಯುತ್ತಿಲ್ಲ. ಶಾಸಕರ ಸಂಖ್ಯಾಬಲ ಹೆಚ್ಚಳವಾಗುತ್ತಿದ್ದಂತೆ ನೇರವಾಗಿ ವಿಧಾನಸಭೆ ಸ್ಪೀಕರ್ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ತೀರ್ಮಾನಿಸಿದೆ.