
ಬೆಂಗಳೂರು,ಜ.15- ಹರಿಯಾಣದ ಗುರುಗ್ರಾಮದಲ್ಲಿರುವ ಎಲ್ಲಾ ಬಿಜೆಪಿ ಶಾಸಕರು ಖಾಸಗಿ ಹೊಟೇಲ್‍ನಲ್ಲಿ ತಂಗಿದ್ದು ಹೊಸ ಸರ್ಕಾರ ರಚನೆಯ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವ ರೂಪುರೇಷೆಗಳು ಮುಂಬೈನ ಖಾಸಗಿ ಹೊಟೇಲ್‍ನಲ್ಲಿ ಸಿದ್ಧಗೊಳ್ಳುತ್ತಿದೆ.
13ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿ, ಬಿಜೆಪಿಗೆ ಸೇರಲಿದ್ದಾರೆ.ಈ ಮೂಲಕ ಮೈತ್ರಿ ಸರ್ಕಾರದ ಬುಡವನ್ನು ಅಲುಗಾಡಿಸುವ ಮಾಸ್ಟರ್ ಪ್ಲಾನ್‍ವೊಂದು ರೂಪಗೊಂಡಿದೆ.
ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ ಎಂದು ಹೇಳಲಾಗುತ್ತಿದೆ.ನಿನ್ನೆ ರಾತ್ರಿ ಅತೃಪ್ತ ಶಾಸಕರಿರುವ ಹೊಟೇಲ್‍ನಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ ಪಾಟೀಲ್, ಶ್ರೀರಾಮುಲು ಅತೃಪ್ತ ಶಾಸಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ರಾಜೀನಾಮೆ ನೀಡುವ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಮರು ಚುನಾವಣೆಯ ಜವಾಬ್ದಾರಿ, ಖರ್ಚು-ವೆಚ್ಚ ಎಲ್ಲವನ್ನೂ ಬಿಜೆಪಿ ಪಕ್ಷ ವಹಿಸಿಕೊಳ್ಳಲು ನಿರ್ಧರಿಸಿದೆ.
ಬಿಜೆಪಿಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಬಿಜೆಪಿಯವರ ಈ ಮಾಸ್ಟರ್ ಸ್ಟ್ರೋಕ್‍ಗೆ ಬೆಚ್ಚಿಬಿದ್ದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ.
ಅತೃಪ್ತರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ.ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಕಾಂಗ್ರೆಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೂಡ ರಂಗಪ್ರವೇಶ ಮಾಡಿದ್ದು, ಅತೃಪ್ತ ಶಾಸಕರು ಎಲ್ಲಿಯೇ ಇರಲಿ ಅವರನ್ನು ಕರೆತರುತ್ತೇನೆ ಎಂದು ತೊಡೆ ತಟ್ಟಿದ್ದಾರೆ.
ಅತ್ತ ಮುಂಬೈನ ರೆನಾಸೆನ್ಸ್ ಹೊಟೇಲ್‍ನಲ್ಲಿರುವ ಕಾಂಗ್ರೆಸ್ ಅತೃಪ್ತರು ಹಾಗೂ ಪಕ್ಷೇತರ ಶಾಸಕರ ಕಾವಲಿಗೆ ಮಹಾರಾಷ್ಟ್ರ ಬಿಜೆಪಿ ಶಾಸಕರು ನಿಂತಿದ್ದಾರೆ.
ಎಲ್ಲರ ಮೊಬೈಲ್ ಪೋನ್‍ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ.ಯಾರ ಸಂಪರ್ಕಕ್ಕೂ ಸಿಗದಂತೆ ವ್ಯವಸ್ಥೆ ಮಾಡಲಾಗಿದೆ.ಮಹಾರಾಷ್ಟ್ರ ಯುವ ಕಾಂಗ್ರೆಸ್ ಕಾರ್ಯಕರ್ತರು ಅತೃಪ್ತ ಶಾಸಕರ ಧೋರಣೆ ಖಂಡಿಸಿ ಹೊಟೇಲ್ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಒಟ್ಟಾರೆ ರಾಜಕೀಯ ಬೆಳವಣಿಗೆಗಳ ರಂಗು ತಾರಕಕ್ಕೇರಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸರ್ಕಾರದ ಹಣೆಬರಹ ನಿರ್ಧಾರವಾಗಲಿದೆ. ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಹೋಗಿ ರಾಜೀನಾಮೆ ನೀಡಲಿದ್ದಾರೆ. ಅಥವಾ ರಾಜ್ಯಪಾಲರ ಮುಂದೆ ಪೆರೇಡ್ ಮಾಡಲಿದ್ದಾರೆಯೇ.. ಈ ಎಲ್ಲದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ನಡುವೆ ಕಾಂಗ್ರೆಸ್-ಜೆಡಿಎಸ್ ನಾಯಕರು ಕೂಡ ಸರ್ಕಾರ ಉಳಿಸಿಕೊಳ್ಳುವ ತಾಂತ್ರಿಕ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ.