ನವದೆಹಲಿ:ಅಮೆರಿಕದ ಪ್ರತಿಷ್ಠಿತ ಫಿಲಿಪ್ ಕೊಟ್ಲೆರ್ ಅಧ್ಯಕ್ಷೀಯ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ.
ವಿಶ್ವಮಟ್ಟದಲ್ಲಿ ತಮ್ಮ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನಿಂದ ಈ ಪ್ರಶಸ್ತಿ ಕೊಡಲಾಗುತ್ತಿದ್ದು ನರೇಂದ್ರ ಮೋದಿಯವರು ಪ್ರಶಸ್ತಿಗೆ ಭಾಜನರಾದ ಮೊದಲ ನಾಯಕರಾಗಿದ್ದಾರೆ.
ಪೀಪಲ್, ಪ್ರಾಫಿಟ್, ಪ್ಲಾನೆಟ್ ಎಂಬ ಮೂರು ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಮೋದಿಯವರು ವಿಶ್ವಮಟ್ಟದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂಥ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ನಿಸ್ವಾರ್ಥವಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ದೇಶವನ್ನು ಸದೃಢಗೊಳಿಸಿ, ಪ್ರಗತಿಯತ್ತ ಕೊಂಡೊಯ್ದಿದ್ದಾರೆ ಎಂದು ಮೋದಿಯವರಿಗೆ ನೀಡಿದ ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಫಿಲಿಪ್ ಕೊಟ್ಲೆರ್ ಅವರು ಅಮೆರಿಕಾದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಪ್ರತಿಭಾನ್ವಿತ ಪ್ರಾಧ್ಯಾಪಕರಾಗಿದ್ದವರು. ಅನಾರೋಗ್ಯದ ನಿಮಿತ್ತ ಅವರು ಸಮಾರಂಭಕ್ಕೆ ಗೈರಾಗಿದ್ದರು. ಫಿಲಿಪ್ ಅನುಪಸ್ಥಿತಿಯಲ್ಲಿ ಯೂನಿವರ್ಸಿಟಿಯ ಜಗದೀಶ್ ಸೇಠ್ ಮೋದಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
PM Narendra Modi honoured with first-ever Philip Kotler Presidential award