ಬೆಂಗಳೂರು, ಜ.15- ಇಂದು ಬೆಳಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ನಾಯಕರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‍ನ ಯಾವ ಶಾಸಕರು ಹಣ, ಅಧಿಕಾರಕ್ಕಾಗಿ ಬೇಸರಗೊಂಡಿಲ್ಲ. ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ವಿಷಯವಾಗಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.ಅದಕ್ಕೆ ಸ್ಪಂದಿಸದೇ ಇರುವುದರಿಂದ ಅಸಮಾಧಾನಗಳು ಹೊರ ಬೀಳುತ್ತವೆ.
ನಾವು ಎಷ್ಟು ಬಾರಿ ಶಾಸಕರನ್ನು ಸಮಾಧಾನ ಪಡಿಸಲು ಸಾಧ್ಯ ?39 ಸ್ಥಾನ ಪಡೆದರು ಜೆಡಿಎಸ್‍ಗೆ ನಾವು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಕಾಂಗ್ರೆಸ್ ಶಾಸಕರನ್ನು ಸಮಾಧಾನಪಡಿಸದೇ ಇದ್ದರೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟ.ಮುಖ್ಯಮಂತ್ರಿ ಆದವರು ಶಾಸಕರ ಜತೆ ಮಾತುಕತೆ ನಡೆಸಬೇಕು.ಅದನ್ನು ಬಿಟ್ಟು ತಮ್ಮ ಪಾಡಿಗೆ ತಾವಿದ್ದು, ಸರ್ಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್‍ನ ಜವಾಬ್ದಾರಿ ಎಂದು ತಮ್ಮ ಪಾಡಿಗೆ ತಾವಿದ್ದರೆ ನಾವು ತಾನೆ ಎಷ್ಟು ಪ್ರಯತ್ನ ಪಡಲು ಸಾಧ್ಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ಅವರು ನಮ್ಮ ಯಾವ ಮಾತುಗಳನ್ನೂ ಪರಿಗಣಿಸುತ್ತಿಲ್ಲ. ಪ್ರತಿ ಬಾರಿಯೂ ರಾಹುಲ್‍ಗಾಂಧಿ ಅವರ ಜತೆಯೇ ಮಾತುಕತೆ ನಡೆಸುತ್ತಾರೆ.ಇಂತಹ ಧೋರಣೆಯಿಂದ ನಾವು ಶಾಸಕರನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್‍ನ ಇತರೆ ನಾಯಕರೂ ಕೂಡ ಇದೇ ರೀತಿಯ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.