ಬೆಂಗಳೂರು, ಜ.15-ಇಂದು ಬೆಳಗ್ಗೆ ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಅಸಂವಿಧಾನಿಕವಾಗಿ ಪ್ರಯತ್ನ ಪಡುತ್ತಿರುವುದು ಇದು ಮೊದಲ ಬಾರಿ ಅಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ರಯತ್ನ ಪಡುತ್ತಲೇ ಇದ್ದಾರೆ. ಹಲವಾರು ಬಾರಿ ಸರ್ಕಾರಕ್ಕೆ ಡೆಡ್ಲೈನ್ಗಳನ್ನು ಕೊಡುತ್ತಲೇ ಇದ್ದಾರೆ. ಯಾವಾಗಲೂ ಯಶಸ್ವಿಯಾಗಿಲ್ಲ. ಈಗಲೂ ಯಶಸ್ವಿಯಾಗುವುದಿಲ್ಲ ಎಂದರು.
ಸರ್ಕಾರ ಪತನಗೊಳಿಸಲು ಕನಿಷ್ಠ 12ರಿಂದ 15 ಮಂದಿ ಶಾಸಕರು ಬೇಕು.ಅಷ್ಟು ಸಂಖ್ಯಾಬಲ ಬಿಜೆಪಿಯವರ ಬಳಿ ಇಲ್ಲ. ಮೂರ್ನಾಲ್ಕು ಮಂದಿ ಬಿಜೆಪಿಯವರ ಜತೆ ಹೋಗಿರಬಹುದು.ಅಷ್ಟರಿಂದಲೇ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ಅವರೇನು ಕುರಿಗಳಲ್ಲ. ಎರಡೂವರೆ ಲಕ್ಷ ಜನರಿಂದ ಮತ ಪಡೆದು ಚುನಾಯಿತರಾದ ಜವಾಬ್ದಾರಿಯುತ ಪ್ರತಿನಿಧಿಗಳು.ಅವರಿಗೆ ಸ್ವಂತ ವಿಚೇಚನೆ ಇದೆ ಎಂದು ತಿಳಿಸಿದರು.
ಮಾಧ್ಯಮಗಳು ದಿನಬೆಳಗಾದರೆ ಬ್ರೇಕಿಂಗ್ ಸುದ್ದಿಗಳನ್ನು ಹಾಕಿ ಅನಗತ್ಯವಾಗಿ ಆತಂಕ ಸೃಷ್ಟಿಸುತ್ತಿವೆ. ಆ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದು ವಸ್ತು ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.