ಬೆಂಗಳೂರು, ಜ.15- ಮುಂಬೈನಲ್ಲಿರುವ ಆರು ಮಂದಿ ಶಾಸಕರು ನಾಳೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳ ನಡುವೆಯೇ ಇಂದು ಸಂಜೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಸಂಜೆ ಮುಂಬೈಗೆ ತೆರಳಲು ನಿರ್ಧರಿಸಿರುವ ಡಿ.ಕೆ.ಶಿವಕುಮಾರ್, ಖಾಸಗಿ ಹೋಟೆಲ್‍ನಲ್ಲಿರುವ ರಮೇಶ್ ಜಾರಕಿಹೊಳಿ, ಉಮೇಶ್ ಜಾದವ್, ಮಹೇಶ್ ಕುಮಟಹಳ್ಳಿ, ನಾಗೇಂದ್ರ, ಪಕ್ಷೇತರರಾದ ನಾಗೇಶ್ ಮತ್ತು ಆರ್.ಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಕ್ಷಣ ಕ್ಷಣಕ್ಕೂ ವಿಚಿತ್ರ ತಿರುವು ಪಡೆಯುತ್ತಿರುವ ರಾಜ್ಯ ರಾಜಕಾರಣದಲ್ಲಿ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವು ತೀವ್ರ ಕುತೂಹಲ ಕೆರಳಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್‍ನ ಮನವೊಲಿಕೆಯ ನಡುವೆ ರಮೇಶ್ ಜಾರಕಿಹೊಳಿ ತಮ್ಮ ಬಿಗಿ ಪಟ್ಟನ್ನು ಸಡಿಲಿಸಿದ್ದು, ಬೇಡಿಕೆಗಳು ಈಡೇರಿದರೆ ತಾವು ಕಾಂಗ್ರೆಸ್‍ನಲ್ಲೇ ಉಳಿಯುವುದಾಗಿ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೆಸರು ಹೇಳುತ್ತಿರುವ ಕೆಲವು ಅತೃಪ್ತ ಶಾಸಕರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‍ನ ನಾಯಕರು ಪದೇ ಪದೇ ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಬಿಜೆಪಿಯ ಲೆಕ್ಕಾಚಾರಗಳು ಏರುಪೇರಾಗಿದ್ದು, ಕಾಂಗ್ರೆಸ್ ಪಾಳಯದ ದುಗುಡ ಹಂತ ಹಂತವಾಗಿ ಕಡಿಮೆಯಾಗುತ್ತಿದೆ.
ಅಂತಿಮ ಕ್ಷಣದಲ್ಲಿ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.