ಬೆಂಗಳೂರು, ಜ.15- ದಿಢೀರ್ ರಾಜಕೀಯ ಬೆಳವಣಿಗೆಗಳಿಂದ ಕಂಗಾಲಾಗಿರುವ ಕಾಂಗ್ರೆಸ್, ಸರ್ಕಾರ ಉಳಿಸಿಕೊಳ್ಳಲು ಅಂತಿಮ ಸುತ್ತಿನ ಕಸರತ್ತನ್ನು ಆರಂಭಿಸಿದ್ದು, ಅತೃಪ್ತ ಶಾಸಕರನ್ನು ಸಂಪರ್ಕಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ಕೆಪಿಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ತಡರಾತ್ರಿ ದಿಢೀರ್ ಬೆಂಗಳೂರಿಗೆ ಆಗಮಿಸಿದ್ದು, ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರ ಜತೆ ಮಾತುಕತೆ ನಡೆಸಿದ್ದಾರೆ.
ನಂತರ ಮಧ್ಯಾಹ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಭೇಟಿ ಮಾಡಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ತಮ್ಮ ಸಂಪರ್ಕದಲ್ಲಿ 21 ಮಂದಿ ಶಾಸಕರಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರವನ್ನು ಕೆಡವುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದು, ಅದಕ್ಕೆ ಪೂರಕವಾಗಿ ಕಾಂಗ್ರೆಸ್ನ ಶಾಸಕರಾದ ರಮೇಶ್ಜಾರಕಿಹೊಳಿ, ನಾಗೇಂದ್ರ, ಉಮೇಶ್ಜಾದವ್ ಅವರುಗಳು ನಾಪತ್ತೆಯಾಗಿರುವುದು ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಆರ್.ಶಂಕರ್ ಅವರು ಬಿಜೆಪಿಯವರ ಜತೆ ಮಾತುಕತೆ ನಡೆಸುತ್ತಿರುವುದು ಕಾಂಗ್ರೆಸ್ನ ಆತಂಕಕ್ಕೆ ಕಾರಣವಾಗಿದೆ.
ಕಾಂಗ್ರೆಸ್ನ ಸುಮಾರು 15 ಮಂದಿ, ಜೆಡಿಎಸ್ನ 6 ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ.ಸಮ್ಮಿಶ್ರ ಸರ್ಕಾರ ಬಿದ್ದೇ ಬೀಳುತ್ತದೆ ಎಂದು ಬಿಜೆಪಿ ಪಾಳಯ ಹೇಳಿಕೊಳ್ಳುತ್ತಿದೆ. ಆದರೆ, ಸರ್ಕಾರ ಪತನಗೊಳ್ಳಬೇಕಾದರೆ ಅವಿಶ್ವಾಸ ನಿರ್ಣಯ ಮಂಡನೆಯಾಗಬೇಕು ಅಥವಾ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು. ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುವ ಸಾಧ್ಯತೆಗಳು ಇಲ್ಲ. ಅವಿಶ್ವಾಸ ನಿರ್ಣಯವಾಗಬೇಕಾದರೆ ವಿಧಾನಸಭೆ ಅಧಿವೇಶನ ನಡೆಯಬೇಕು.
ಸಮ್ಮಿಶ್ರ ಸರ್ಕಾರ ಫೆ.8ರಿಂದ ಅಧಿವೇಶನ ಕರೆದಿದೆ.ಅದಕ್ಕೂ ಮೊದಲೇ ಬಿಜೆಪಿ ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬುದನ್ನು ಸಾಬೀತುಪಡಿಸಲು ತುರ್ತು ಅಧಿವೇಶನ ಕರೆಯುವಂತೆ ರಾಜ್ಯಪಾಲರ ಮೊರೆ ಹೋಗಬೇಕಿದೆ.
ರಾಜ್ಯಪಾಲರಿಗೆ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದು ಮನದಟ್ಟಾಗಬೇಕಾದರೆ ಶಾಸಕರ ಪರೇಡ್ ನಡೆಯಬೇಕು. ಇಲ್ಲವೇ ಸಹಿ ಹಾಕಿದ ಪತ್ರಗಳು ರಾಜ್ಯಪಾಲರಿಗೆ ಸಲ್ಲಿಕೆಯಾಗಬೇಕು.
ಇದೆಲ್ಲವನ್ನೂ ಹೊರತುಪಡಿಸಿ ಅಂತಿಮ ಮಾರ್ಗ ಎಂದರೆ ಶಾಸಕರು ರಾಜೀನಾಮೆ ನೀಡಿ ಹೊರ ಹೋಗುವುದು. ಆದರೆ, ರಾಜೀನಾಮೆ ನೀಡಿ ಹೊರ ಹೋದರೆ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಅತೃಪ್ತ ಎಲ್ಲಾ ಶಾಸಕರಿಗೂ ಇಲ್ಲ.
ಹೀಗಾಗಿ ಬಹಳಷ್ಟು ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.ಬಿಜೆಪಿ ಸರ್ಕಾರ ರಚನೆ ಮಾಡಿ ತಮಗೆ ಸಚಿವ ಸ್ಥಾನ ಕೊಟ್ಟಿದ್ದೇ ಆದರೆ ಪರಿಶೀಲಿಸುವ ಭರವಸೆಯನ್ನು ಕೆಲವರು ನೀಡಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ವಿದ್ಯಮಾನಗಳಲ್ಲಿ ಬಿಜೆಪಿಯವರು ಹೆಸರು ಹೇಳುತ್ತಿರುವ ಅತೃಪ್ತ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಸಂಪರ್ಕಿಸಿದ್ದು, ಬಹುತೇಕ ಮಂದಿ ತಮ್ಮ ಕ್ಷೇತ್ರದಲ್ಲೇ ಇದ್ದಾರೆ.ಇನ್ನೂ ಕೆಲವರು ತಮ್ಮ ಕುಟುಂಬದವರೊಂದಿಗೆ ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿಗಳಿವೆ.
ಆದರೂ ಬಿಜೆಪಿ ತಮ್ಮ ಬಳಿ 21 ಮಂದಿ ಶಾಸಕರಿದ್ದಾರೆ ಎಂದು ಹೇಳಿಕೊಳ್ಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಹೈಕಮಾಂಡ್ ಟ್ರಬಲ್ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಅಖಾಡಕ್ಕಿಳಿಸಿದ್ದು, ಒಂದು ವೇಳೆ ಆಪರೇಷನ್ ಕಮಲಕ್ಕೆ ಸಿಲುಕಿ ಯಾರಾದರು ಪಕ್ಷ ಬಿಟ್ಟು ಹೋದರೆ ಅವರನ್ನು ಮರಳಿ ಕರೆತರುವ ತಾಕತ್ತು ಕಾಂಗ್ರೆಸ್ಗಿದೆ ಎಂದು ಹೇಳಿ ಸಡ್ಡು ಹೊಡೆದಿದೆ.
ಬಿಜೆಪಿ ಪಾಳಯದಲ್ಲಿದ್ದಾರೆ ಎಂದು ಹೇಳಲಾಗಿರುವ ಆನಂದ್ಸಿಂಗ್ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಾವು ಕಾಂಗ್ರೆಸ್ನಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.