ವಾಷಿಂಗ್ಟನ್, ಜ.14 (ಪಿಟಿಐ)- ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದನೆ ದಾಳಿಯ ಸಂಚುಗಾರ ಮತ್ತು ಕುಖ್ಯಾತ ಉಗ್ರಗಾಮಿ ತಹೌವುರ್ ಹುಸೇನ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಬಲ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲವೊಂದು ತಿಳಿಸಿದೆ.
ಪಾಕಿಸ್ತಾನ-ಕೆನಡಾ ಪ್ರಜೆಯಾಗಿರುವ ರಾಣಾ ಪ್ರಸ್ತುತ ಅಮೆರಿಕದಲ್ಲಿ 14 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದು, ಈತನ ಶಿಕ್ಷೆ ಅವಧಿ ಡಿಸೆಂಬರ್ 2021ಕ್ಕೆ ಪೂರ್ಣಗೊಳ್ಳಲಿದೆ.
ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ ರಾಣಾನನ್ನು ತಕ್ಷಣ ಭಾರತಕ್ಕೆ ಹಸ್ತಾಂತರ ಪಡೆಯಲು ಕಾರ್ಯೋನ್ಮುಖವಾಗಿದೆ. ಆತನನ್ನು ಅಲ್ಲಿಂದ ಗಡಿಪಾರು ಮಾಡಲು ಅಗತ್ಯವಾದ ದಾಖಲೆಪತ್ರಗಳ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಭಾರತಕ್ಕೆ ಸಂಪೂರ್ಣ ನೆರವು ನೀಡುತ್ತಿದೆ.
ಅಮೆರಿಕನ್ನರೂ ಸೇರಿದಂಥೆ 166 ಜನರು ಬಲಿಯಾದ ಮುಂಬೈನ 26/11ರ ಉಗ್ರರ ಭೀಕರ ದಾಳಿ ಸಂಬಂಧ 2009ರಲ್ಲಿ ರಾಣಾನನ್ನು ಬಂಧಿಸಲಾಗಿತ್ತು. ಪಾಕಿಸ್ತಾನ ಮೂಲಕ ಲಷ್ಕರ್-ಎ-ತೈಬಾ(ಎಲ್ಇಟಿ) ಉಗ್ರಗಾಮಿ ಸಂಘಟನೆಯ 10 ಭಯೋತ್ಪಾದಕರು ಈ ದಾಳಿ ನಡೆಸಿದ್ದರು. ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಒಂಭತ್ತು ಉಗ್ರರು ಹತರಾದರು. ಸೆರೆ ಸಿಕ್ಕಿದ ಏಕೈಕ ಉಗ್ರ ಅಜ್ಮಲ್ ಕಸಾಬ್ಗೆ ಮರಣದಂಡನೆ ವಿಧಿಸಲಾಗಿತ್ತು.
ಭಯೋತ್ಪಾದನೆ ದಾಳಿ ಪ್ರಕರಣದ ಸಂಬಂಧ ರಾಣಾನನ್ನು 2013ರಲ್ಲಿ ರಾಣಾನಿಗೆ 14 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಈಗ ಸೆರೆವಾಸ ಅನುಭವಿಸುತ್ತಿರುವ ಈ ಉಗ್ರಗಾಮಿ 2021ರಲ್ಲಿ ಬಿಡುಗಡೆಯಾಗಲಿದ್ದು, ನಂತರ ಭಾರತಕ್ಕೆ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ.