ಹೃದಯಾಘಾತದಿಂದ ನಿಧನರಾದ ಕೃಷಿ ಪಂಡಿತ ನಾರಾಯಣರೆಡ್ಡಿ

ದೊಡ್ಡಬಳ್ಳಾಪುರ, ಜ.14-ಸಾವಯವ ಕೃಷಿಯಲ್ಲಿ ಪ್ರಖ್ಯಾತರಾಗಿದ್ದ ನಾರಾಯಣರೆಡ್ಡಿ(80) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ಕೊನೆಯ ಪಾಠ ಮಾಡಿದ ಈ ಕೃಷಿ ಪಂಡಿತ ತಮ್ಮ ಉಸಿರಾಗಿದ್ದ ತೋಟದಲ್ಲೇ ಮೃತರಾಗಿದ್ದಾರೆ.

ನಾರಾಯಣರೆಡ್ಡಿ ಅವರ ಅಂತಿಮ ಸಂಸ್ಕಾರ ಅವರ ಹುಟ್ಟೂರಾದ ವೈಟ್‍ಫೀಲ್ಡ್ ಬಳಿಯ ವರ್ತೂರಿನಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ್ದ ಅವರು, ಬೆಳಗ್ಗೆ ಎಂದಿನಂತೆ 4 ಗಂಟೆಗೆ ತೋಟದ ಕೆಲಸಕ್ಕೆ ತೆರಳುತ್ತಿದ್ದರಾದರೂ ಇಂದು ಮುಂಜಾನೆ 5 ಗಂಟೆಯಾದರೂ ಎಚ್ಚರವಾಗಿರಲಿಲ್ಲ. ಮನೆಯವರು ಗಮನಿಸಿದಾಗ ಅವರು ಹೃದಯಾಘಾತದಿಂದ ಅಸುನೀಗಿದ್ದರು.

ಸಾವಯವ ಕೃಷಿಗೆ ಆಧುನಿಕತೆಯ ಮೆರಗು ನೀಡುವ ಮೂಲಕ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‍ಡಿ ಸೇರಿದಂತೆ ಅದೆಷ್ಟೋ ಕೃಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ವಾಸವಿದ್ದ ಅವರು, ಇಂದು ರೈತರು ಸೇರಿದಂತೆ ಕೃಷಿ ಪದವೀಧರರಿಗೆ ಸಾವಯವ ಕೃಷಿ ಕುರಿತಂತೆ ಬೋಧನೆ ಮಾಡುತ್ತಾ, ದೇಶ-ವಿದೇಶಗಳಲ್ಲೂ ಹೆಸರಾಗಿದ್ದರು.

ಇವರ ಸಾಧನೆಗಳಿಗೆ ಹತ್ತು, ಹಲವು ಪ್ರಶಸ್ತಿ ಸನ್ಮಾನಗಳು ಹರಿದು ಬಂದಿತ್ತು. ಕೃಷಿ ಕ್ಷೇತ್ರದ ಸಾಧನೆಗೆ ಗೌರವ ಡಾಕ್ಟರೇಟ್ ಗಳಿಸಿದ್ದ ಇವರು, ತಮ್ಮ ತೋಟವನ್ನೇ ಒಂದು ವಿಶ್ವವಿದ್ಯಾನಿಲಯವನ್ನಾಗಿಸಿ ಕೃಷಿ ವಿದ್ಯಾರ್ಥಿಗಳು, ಸಂಶೋಧನಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳಿಗೂ ಸಲಹೆಗಾರರಾಗಿದ್ದರು.

ಸಾಕಷ್ಟು ಸಮಯ ವಿದ್ಯಾರ್ಥಿಗಳ ಜೊತೆ ಕಾಲ ಕಳೆಯುತ್ತಿದ್ದ ನಾರಾಯಣರೆಡ್ಡಿ ಕೃಷಿ ಪಂಡಿತರೆಂದೇ ಖ್ಯಾತಿ ಗಳಿಸಿದ್ದರು. ಭೂತಾಯಿ ಸೇವೆ ಮೂಲಕವೇ ಎಲ್ಲೆಡೆ ತಮ್ಮ ಹೆಸರನ್ನು ಪ್ರಖ್ಯಾತಿಗೊಳಿಸಿದ್ದರು.

ಅಳಿವಿನಂಚಿನಲ್ಲಿದ್ದ ಕೃಷಿಗೆ ಹೊಸ ದಿಕ್ಕು ತೋರುವ ಮೂಲಕ ಸಂಕಷ್ಟದಲ್ಲಿ ನಲುಗುತ್ತಿದ್ದ ರೈತನಿಗೆ ದಾರಿದೀಪವಾಗಿದ್ದರು. ಅವರ ಅಗಲಿಕೆಯಿಂದ ಕೃಷಿ ಕ್ಷೇತ್ರದ ಸಾಧನೆಯ ಕೊಂಡಿ ಕಳಚಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ