ಪ್ರಯಾಗ್ರಾಜ್ (ಅಲಹಾಬಾದ್): ತ್ರಿವೇಣಿ ಸಂಗಮ ಸ್ಥಾನವಾದ ಉತ್ತರ ಪ್ರದೇಶದ ಪ್ರಯಾಗ್ರಾಜ್ ಅರ್ಧ ಕುಂಭಮೇಳ ಸಜ್ಜಾಗಿದ್ದು, ಜ.15ರಿಂದ ಮಾರ್ಚ್ 4ರ ವರೆಗೆ ಕುಂಭಮೇಳ ನಡೆಯಲಿದೆ.
ಉತ್ತರಾಯಣದ ಪರ್ವಕಾಲದ ಪುಣ್ಯ ಸ್ನಾನದ ಸುಮುಹೂರ್ತಕ್ಕೆ ಸಾಧು- ಸಂತರು ಸೇರಿದಂತೆ ಲಕ್ಷಾಂತರ ಭಕ್ತರು ಪ್ರಯಾಗಕ್ಕೆ ಆಗಮಿಸಿದ್ದು, ಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಕುಂಭಮೇಳವನ್ನು ಯಶಸ್ವಿಯೊಳಿಸಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ. 3,200 ಹೆಕ್ಟೇರ್ ಪ್ರದೇಶವನ್ನು ಕುಂಭಮೇಳದ ಪ್ರದೇಶವನ್ನಾಗಿ ಗುರುತಿಸಿ, 4,300 ಕೋಟಿ ವೆಚ್ಚದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದೆ. ಯಾತ್ರಾರ್ಥಿಗಳಿಗೆ ನದಿ ದಡಗಳಲ್ಲಿ ಕುಟೀರಗಳನ್ನು ನಿರ್ವಿುಸಿ, ತಾತ್ಕಾಲಿಕ ನಗರವನ್ನು ಸೃಷ್ಟಿಸಲಾಗಿದೆ. ಕುಂಭಮೇಳದ ಭದ್ರತೆಗೆ 45 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ನದಿ ದಾಟಲು ತಾತಾಲ್ಕಿಕ ಸೇತುವೆ ನಿರ್ವಿುಸಲಾಗಿದೆ.
ಕುಂಭ ಮೇಳದ ಮಹತ್ವ, ಇತಿಹಾಸ ಮತ್ತು ಧಾರ್ವಿುಕ ಹಿನ್ನೆಲೆಯನ್ನು ಪರಿಚಯಿಸಲು ಲೇಸರ್ ಷೋವನ್ನು ಗಂಗಾ-ಯಮುನಾ-ಸರಸ್ವತಿ ನಡಿಗಳಾದ ತ್ರಿವೇಣಿ ಸಂಗಮದ ಸ್ಥಳದಲ್ಲಿ ಆಯೋಜಿಸಲಾಗಿದೆ.
‘ಸ್ವಚ್ಛ ಕುಂಭ್, ಸುರಕ್ಷಿತ ಕುಂಭ್’ ಘೋಷ ವಾಕ್ಯದೊಂದಿಗೆ ನದಿ ದಡಗಳಲ್ಲಿ 1.22 ಲಕ್ಷ ಪರಿಸರ ಸ್ನೇಹಿ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆಗೆ 50 ಶುದ್ಧೀಕರಣ ಘಟಕಗಳನ್ನು ವಿವಿಧೆಡೆ ಸ್ಥಾಪಿಸಲಾಗಿದೆ. ಇವು ಎಟಿಎಂಗಳಂತೆ ಕಾರ್ಯನಿರ್ವಹಿಸಲಿವೆ. ಇದರ ಹೊರತಾಗಿ ಐದು ಸಾವಿರ ನೀರಿನ ಅರವಟ್ಟಿಗೆಗಳನ್ನು ತೆರೆಯಲಾಗಿದೆ.
ನದಿ ದಡದಲ್ಲಿ ಆರು ಕಡೆ ನಿರ್ವಿುಸಿರುವ ತಾತಾಲ್ಕಿಕ ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕುಟೀರಗಳನ್ನು ನಿರ್ವಿುಸಲಾಗಿದೆ. ಇದರ ಹೊರತಾಗಿ 51 ಮಹಾರಾಜ ಮತ್ತು ಸ್ವಿಸ್ ಕಾಟೇಜ್ಗಳನ್ನು ತೆರೆಯಲಾಗಿದೆ. ತಾತ್ಕಾಲಿಕ ನಗರದ ನಿರ್ವಹಣೆಗಾಗಿ ತಂತ್ರಜ್ಞಾನ ಆಧಾರಿತ ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ. 1,400 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 40 ಸಾವಿರ ಎಲ್ಇಡಿ ಬೀದಿ ದೀಪಗಳನ್ನು ಹಾಕಲಾಗಿದೆ.
ಕುಂಭಮೇಳಕ್ಕೆ ಪೂರೈಕೆಯಾಗುವ ನೀರಿಗೆ ವಿಷ ಬೆರೆಸುವಂತೆ ಉಗ್ರ ಅಬ್ದುಲ್ ರಶೀದ್ ಎಂಬಾತ ಬೆಂಬಲಿಗರಿಗೆ ಕರೆ ನೀಡುತ್ತಿರುವ ಧ್ವನಿಮುದ್ರಿಕೆ ಬೆಳಕಿಗೆ ಬಂದಿದೆ. ಕೇರಳದ ಯುವಕರನ್ನು ಐಸಿಸ್ಗೆ ಸೇರಿಸುವ ಕೆಲಸದಲ್ಲಿ ಅಬ್ದುಲ್ ರಶೀದ್ ನಿರತನಾಗಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕುಂಭಮೇಳಕ್ಕೆ ಭಾರೀ ಭದ್ರತೆ ಒಡಗಿಸಲಾಗಿದೆ.
Ardha Kumbha Mel,Prayagraj,modern amenities and security