ಮೈಸೂರು, ಜ.14- ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮುಂಬೈ ಹಾಗೂ ದೆಹಲಿಯಲ್ಲಿರುವ ಶಾಸಕರು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಅವರು ನನಗೆ ಹೇಳಿಯೇ ಹೋಗಿದ್ದಾರೆ. ಹೀಗಾಗಿ ಸರ್ಕಾರ ಅಸ್ಥಿರಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಸಂಕ್ರಾಂತಿ ಮುಗಿದ ಬಳಿಕ ರಾಷ್ಟ್ರಪತಿ ಆಡಳಿತ ಬರುತ್ತದೆ ಎಂಬ ಮಾಹಿತಿ ಮಾಧ್ಯಮದಲ್ಲಿ ಬಂದಿದೆ. ಅವರಿಗೆ ಈ ಮಾಹಿತಿ ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಇದರಿಂದ ಯಾರಿಗೆ ಯಾವ ಲಾಭವಾಗುತ್ತದೆಯೋ ಗೊತ್ತಿಲ್ಲ. ಆದರೆ, ಮೂರು ಮಂದಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ. ದೆಹಲಿ ಹಾಗೂ ಮುಂಬೈಗೆ ಹೋಗಿರುವ ಶಾಸಕರು ತಮ್ಮ ಸ್ನೇಹಿತರೇ ಆಗಿದ್ದಾರೆ. ಸರ್ಕಾರ ಅಭದ್ರವಾಗುವುದಾದರೆ ತಾವು ಇಷ್ಟೊಂದು ಆರಾಮವಾಗಿರಲು ಸಾಧ್ಯವಾಗಿರುತ್ತಿತ್ತೇ ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಶಾಸಕರು ಹೋಗಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಸಭೆ ಮಾಡುತ್ತಿದ್ದಾರೆ ಎಂದರೆ ನಾವೇನು ಮಾಡಲು ಸಾಧ್ಯ. ದೊಡ್ಡಮಟ್ಟದ ಉಡುಗೊರೆ ಕೊಡುವ ಆಹ್ವಾನದ ಮಾಹಿತಿ ಶಾಸಕರಿಗೆ ನೀಡಿರುವುದು ತಮಗೆ ಗೊತ್ತಿದೆ. ಇದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇದರಲ್ಲಿ ಬಿಜೆಪಿ ಪ್ರಯತ್ನವಿಲ್ಲ ಎಂದರೆ ಹೇಗೆ ಎಂದ ಅವರು, ಬಿಜೆಪಿ ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಯಾರೂ ಕೂಡ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.