ಬೆಂಗಳೂರು, ಜ.14- ಈಗಾಗಲೇ ರಾಜ್ಯದ 156 ತಾಲೂಕುಗಳನ್ನು ಹಿಂಗಾರು ಹಂಗಾಮಿನಲ್ಲಿ ಬರ ಪೀಡಿತವೆಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಆಯಾ ಜಿಲ್ಲೆ ಹಾಗೂ ತಾಲೂಕುವಾರು ಬೆಳೆ ಹಾನಿ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.
ಪೂರ್ಣ ಪ್ರಮಾಣದಲ್ಲಿ ಹಿಂಗಾರು ಹಂಗಾಮಿನ ಬರ ಪೀಡಿತ ಪ್ರದೇಶಗಳಲ್ಲಿನ ಬೆಳೆಸಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಬರ ಪೀಡಿತ ಪ್ರದೇಶಗಳ ಪಟ್ಟಿಯೊಂದಿಗೆ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದು, ಜನವರಿ ಅಂತ್ಯಕ್ಕೆ ಮನವಿ ಪತ್ರ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನು ರಾಜ್ಯ ಸರ್ಕಾರ ಸಲ್ಲಿಸಿ ಪರಿಹಾರ ಧನ ಬಿಡುಗಡೆ ಮಾಡುವಂತೆ ಕೋರಲಿದೆ.ಇದಾದ ನಂತರ ಕೇಂದ್ರದಿಂದ ಅಧ್ಯಯನ ತಂಡ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬರ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಿದೆ.ಆ ನಂತರ ಕೇಂದ್ರ ಸರ್ಕಾರ ಪರಿಹಾರ ಧನದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ರಾಜ್ಯ ಸರ್ಕಾರ ಬರ ವಿಚಾರಕ್ಕೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿಯನ್ನು ರಚನೆ ಮಾಡಿದೆ. ಬರ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಕೂಡ ಕೈಗೊಳ್ಳಲಾಗಿದೆ.ಮುಂಗಾರು ಹಂಗಾಮಿನಲ್ಲಿ ನೂರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಲಾಗಿತ್ತು.ಆ ತಾಲೂಕುಗಳಿಗೆ ಕೇಂದ್ರ ಸರ್ಕಾರ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಎರಡನೆ ಕಂತಿನ ಹಣ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು, ಜನರಿಗೆ ಉದ್ಯೋಗ ಸೇರಿದಂತೆ ಸಮರ್ಪಕ ನಿರ್ವಹಣೆಗೆ ಸೂಚನೆ ನೀಡಲಾಗಿದೆ.