ತಿರುವನಂತಪುರಂ: ಮಕರಸಂಕ್ರಮಣ ಹಿನ್ನಲೆಯಲ್ಲಿ ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ಇದಕ್ಕಾಗಿ ಅಯ್ಯಪ್ಪ ಮಾಲಾಧಾರಿಗಳು ಸ್ಝಬರಿಮಲೆಯಲ್ಲಿ ಬೀಡುಬಿಟ್ಟಿದ್ದು, ಪಂಪೆಯ ವಿವಿಧೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ಈ ಬಾರಿ ಶಬರಿಮಲೆ ಆಸುಪಾಸು ಪುಲ್ಲುಮೇಡ್, ಪಾಂಚಾಲಿಮೇಡ್, ಉಪ್ಪುಪಾರ ಸಹಿತ ಹತ್ತು ಕೇಂದ್ರಗಳಲ್ಲಿ ಮಕರಜ್ಯೋತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಅಪಾಯದ ಭೀತಿಯಿಂದ ಮುಂಜಾಗೃತಾ ಕ್ರಮವಾಗಿ ಪಂಪೆಯ ಹಿಲ್ಟಾಪ್ನಲ್ಲಿ ಮಕರಜ್ಯೋತಿ ವೀಕ್ಷಣೆಗೆ ಭಕ್ತಾದಿಗಳಿಗೆ ತೆರಳಲು ಅನುಮತಿ ನಿರಾಕರಿಸಲಾಗಿದೆ. ಪಂಪೆ ಆಸುಪಾಸು 1600 ಪೊಲೀಸರನ್ನು ನಿಯೋಜಿಸಲಾಗಿದೆ.
ಪಂದಳ ಅರಮನೆಯಿಂದ ಹೊರಟ ಚಿನ್ನಾಭರಣದ ಮೆರವಣಿಗೆ ಸಂಪ್ರದಾಯದಂತೆ ಕಾಡಿನ ಹಾದಿಯಲ್ಲಿ ಸಾಗಿ, ಸೋಮವಾರ ಸಾಯಂಕಾಲ 6.15ಕ್ಕೆ ಸನ್ನಿಧಾನ ತಲುಪಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ಚಿನ್ನಾಭರಣ ತೊಡಿಸಿ, 6.40ಕ್ಕೆ ದೀಪಾರಾಧನೆ ಇರಲಿದೆ. ನಂತರ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ. ಮಕರಸಂಕ್ರಮಣ ಅಂಗವಾಗಿ ಭಾನುವಾರ ಬಿಂಬ ಶುದ್ಧಿ, ಸ್ಥಳಶುದ್ಧಿ ನೆರವೇರಿತು.
ತಂತ್ರಿ ಕಂಠರರ್ ರಾಜೀವರ್ ಅವರ ನೇತೃತ್ವ ಹಾಗೂ ಮುಖ್ಯ ಅರ್ಚಕ ವಿ.ಎನ್. ವಾಸುದೇವನ್ ನಂಬೂದಿರಿ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆದವು.
sabarimala temple,makarajyoti,makara sankramana festival