ಬಿಜೆಪಿಯಿಂದ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯುವ ಪ್ರಯತ್ನ

ಬೆಂಗಳೂರು,ಜ.14- ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಮುಂದುವರೆದಿದ್ದು, 14 ಶಾಸಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ.

ಈಗಾಗಲೇ ಮುಂಬೈನಲ್ಲಿ ಐದು ಕಾಂಗ್ರೆಸ್‍ನ ಶಾಸಕರು ಬೀಡುಬಿಟ್ಟಿದ್ದು, ಉಳಿದವರು ಯಾವುದೇ ಸಂದರ್ಭದಲ್ಲೂ ಅತೃಪ್ತರ ಬಣ ಸೇರಿಕೊಳ್ಳುವ ಸಾಧ್ಯತೆ ಇದೆ.

ಇತ್ತ ತನ್ನ ಶಾಸಕರಿಗೆ ಕಾಂಗ್ರೆಸ್-ಜೆಡಿಎಸ್ ಖೆಡ್ಡಾ ತೋಡಬಹುದೆಂದು ಎಚ್ಚೆತ್ತುಕೊಂಡಿರುವ ಬಿಜೆಪಿ ದೆಹಲಿಯಲ್ಲಿ ಶಾಸಕರನ್ನು ಒಂದೇ ಕಡೆ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದೆ.
ಸದ್ಯಕ್ಕೆ ದೆಹಲಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅನುಮತಿ ಇಲ್ಲದೆ ಯಾರೊಬ್ಬರು ಬೆಂಗಳೂರಿಗೆ ತೆರಳಬಾರದು ಎಂದು ಕಟ್ಟಪ್ಪಣೆ ವಿಧಿಸಲಾಗಿದೆ. ಹೀಗಾಗಿ ವಿಧಿಯಿಲ್ಲದೆ ಶಾಸಕರು ದೆಹಲಿಯಲ್ಲಿ ಕೊರೆಯುವ ಚಳಿಯನ್ನು ಅನುಭವಿಸಬೇಕಾಗಿದೆ.

ಇನ್ನು ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆದು ಸರ್ಕಾರ ರಚಿಸುವ ಪ್ರಯತ್ನವನ್ನು ಬಿಜೆಪಿ ಈ ಕ್ಷಣದವರೆಗೂ ಕೈಬಿಟ್ಟಿಲ್ಲ. ಸಂಕ್ರಾಂತಿ ನಂತರ ಶತಾಯಗತಾಯ ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರ ರಚಿಸಲು ಕಮಲ ನಾಯಕರು ತೆರೆಮರೆಯಲ್ಲಿ ಕಸರತ್ತು ಮುಂದುವರೆಸಿದ್ದಾರೆ.

ಕೈ ಕೊಡ್ತಾರ ಶಾಸಕರು?:
ಮೂಲಗಳ ಪ್ರಕಾರ ಈ ಬಾರಿ ಆಪರೇಷನ್ ಕಮಲ ವಿಫಲವಾಗದಂತೆ ಎಚ್ಚರಿಕೆ ವಹಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ಕೆಲವೇ ನಾಯಕರನ್ನು ಹೊರತುಪಡಿಸಿದರೆ ಉಳಿದವರಿಗೆ ಒಂದಿಷ್ಟೂ ಮಾಹಿತಿಯೂ ಸೋರಿಕೆಯಾಗದಂತೆ ಅತ್ಯಂತ ಜಾಗರೂಕತೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಈಗಾಗಲೇ ಮುಂಬೈನಲ್ಲಿ ಐವರು ಶಾಸಕರು ಬೀಡುಬಿಟ್ಟಿದ್ದಾರೆ. ಬೆಳಗಾವಿಯ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಬಳ್ಳಾರಿಯ ಬಿ.ನಾಗೇಂದ್ರ ಸೇರಿದಂತೆ ಅತೃಪ್ತ ಶಾಸಕರು ರಹಸ್ಯ ಸ್ಥಳವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅತೃಪ್ತರ ಬಣಕ್ಕೆ ಕಾಂಗ್ರೆಸ್‍ನ ಕೆಲವು ಶಾಸಕರು ಸೇರಿಕೊಳ್ಳುವ ಸಾಧ್ಯತೆ ಇದೆ. ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ರಾಯಚೂರ ಗ್ರಾಮೀಣಾ ಶಾಸಕ ಬಸವನಗೌಡ ದದ್ದೂರ್, ಹಿರೇಕೆರೂರಿನ ಬಿ.ಸಿ.ಪಾಟೀಲ್, ಚಿಂಚೋಳಿಯ ಉಮೇಶ್ ಜಾದವ್, ವಿಜಯನಗರದ ಆನಂದ್ ಸಿಂಗ್, ಕಂಪ್ಲಿಯ ಗಣೇಶ್, ನಾಗಾಠಾಣದ ದೇವೇಂದ್ರ ಚೌಹಾಣ್, ಕುಷ್ಟಗಿಯ ಅಮರೇಗೌಡ ಬೈಯ್ಯಾಪುರ, ರಾಣಿಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್, ಮುಳಬಾಗಿಲಿನ ಎಚ್.ನಾಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರಿಗೆ ಬಲೆ ಬೀಸಲಾಗಿದೆ.

ಇದರಲ್ಲಿ ಈಗಾಗಲೇ ಶಿವರಾಂ ಹೆಬ್ಬಾರ್, ಉಮೇಶ್ ಜಾದವ್ ಕಳೆದ ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದಿರುವುದು ಕಾಂಗ್ರೆಸ್ ಬಿಟ್ಟು ಹೋಗಲಿದ್ದಾರೆ ಎಂಬ ವದಂತಿಗಳಿಗೆ ಇಂಬು ಕೊಡುವಂತಿದೆ.

ಈ ಎಲ್ಲ ಶಾಸಕರನ್ನು ರಮೇಶ್ ಜಾರಕಿಹೊಳಿ ಮತ್ತು ಬಿ.ನಾಗೇಂದ್ರ ಅವರೇ ಖುದ್ದು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಉಪಚುನಾವಣೆಯಲ್ಲಿ ಖರ್ಚುವೆಚ್ಚ , ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ನಿಗದಿತ ಶಾಸಕರಿಗೆ ಸಚಿವ ಸ್ಥಾನ, ನಿಗಮಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗಿದೆ.

ಈವರೆಗೂ ಬಿಜೆಪಿಗೆ ಬರಲು ಎಂಟು ಶಾಸಕರು ಒಪ್ಪಿಕೊಂಡಿದ್ದಾರೆ. ಉಳಿದವರು ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಿಗದಿತ ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಪರೇಷನ್ ಕಮಲ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ