ಬೆಂಗಳೂರು,ಜ.13- ಪಿಎಸ್ಐ(ಸಿವಿಲ್) ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಮ್ಮ ಬಳಿ ಇದೆಯೆಂದು ಹೇಳಿ ಅಭ್ಯರ್ಥಿಗಳಿಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಐವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ 8 ತಂಡ ರಾಜ್ಯದ ವಿವಿಧ ಕಡೆ ದಾಳಿ ನಡೆಸುತ್ತಿದೆ.ಪ್ರಶ್ನೆ ಪತ್ರಿಕೆ ನಿಜಕ್ಕೂ ಸೋರಿಕೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿದೆ.
ಈ ನಡುವೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ಗುಲ್ಬರ್ಗಾ, ಬೆಳಗಾವಿ, ದಾವಣಗೆರೆ ಮತ್ತು ಮೈಸೂರಿನಲ್ಲಿಂದು ಪಿಎಸ್ಐ(ಸಿವಿಲ್)ನ 190 ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯುತ್ತಿದೆ.
ಇದನ್ನೇ ಬಂಡವಾಳವಾಗಿಸಿಕೊಂಡ ಐವರು ತಮ್ಮ ಬಳಿ ಪ್ರಶ್ನೆ ಪತ್ರಿಕೆಯಿದೆ ಎಂದು ಹೇಳಿ ಅದಕ್ಕಾಗಿ ಲಕ್ಷ ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.