ತ್ರಿವಳಿ ತಲಾಖ್ ನಿಷೇಧ ಕುರಿತ ಸುಗ್ರೀವಾಜ್ಞೆ ಮರು ಘೋಷಣೆ ಮಾಡಿದ ಕೇಂದ್ರ

ನವದೆಹಲಿ: ತ್ರಿವಳಿ ತಲಾಖ್ ಪದ್ದತಿಯನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಪುನ: ಘೋಷಣೆ ಮಾಡಿದೆ.

ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) 2019 ಆದೇಶದಂತೆ ತ್ರಿವಳಿ ತಲಾಕ್ ಮೂಲಕ ವಿಚ್ಚೇದನ ಹೊಂದುವುದು ಕಾನೂನು ಬಾಹಿರ. ಹಾಗೂ ಈ ವಿಚ್ಚೇದನವು ಕಾನೂನಿನಡಿ ಮಾನ್ಯವಲ್ಲ. ಅಲ್ಲದೆ ಈ ಬಗೆಯಲ್ಲಿ ತ್ರಿವಳಿ ತಲಾಕ್ ನಿಡಿದ ಪತಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ.

ಈ ಹಿಂದಿನ ಸುಗ್ರೀವಾಜ್ಞೆಯನ್ನು ಪರಿವರ್ತಿಸುವ ಮಸೂದೆಯೊಂದಕ್ಕೆ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಮಂಡಿಸಲಾಗಿತ್ತು. ಡಿಸೆಂಬರ್‍ನಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಈ ವಿಧೇಯಕಕ್ಕೆ ಅನುಮೋದನೆ ನೀಡಿತ್ತು. ರಾಜ್ಯಸಭೆಯಲ್ಲಿ ಇದು ಅಂಗೀಕಾರವಾಗಬೇಕಿದೆ.

ಈ ಮಸೂದೆಗೆ ಸಂಸತ್ ಅನುಮೋದನೆ ಲಭಿಸದ ಹಿನ್ನೆಲೆಯಲ್ಲಿ, ಹೊಸ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ. ಸುಗ್ರೀವಾಜ್ಞೆ ಮರು ಜಾರಿಗೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿತ್ತು.

ಸುಗ್ರೀವಾಜ್ಞೆಯಲ್ಲಿನ ಕೆಲ ಪ್ರಮುಖ ಅಂಶಗಳು ಆರೋಪಿಯು ಇದೊಂದು ಜಾಮೀನು ರಹಿತ ಅಪರಾಧವಾಗಿದ್ದರೂ ಸಹ ವಿಚಾರಣೆಗೆ ಮುಂಚೆಯೇ ಜಾಮೀನಿಗಾಗಿ ನ್ಯಾಯಾಧೀಶರನ್ನು ಸಂಪರ್ಕಿಸಲು ಅವಕಾಶವಿದೆ. ಆದರೆ ಜಾಮೀನು ರಹಿತ ಅಪರಾಧದಡಿಯಲ್ಲಿ ಪೋಲೀಸರು ಪೋಲೀಸ್ ಠಾಣೆಯಲ್ಲಿಯೇ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ.

ಪತ್ನಿಯ ಹೇಳಿಕೆ ಕೇಳಿದ ನಂತರ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ಅವಕಾಶವಿದೆ. ಮಸೂದೆಯಲ್ಲಿ ಹೇಳಲ್ಪಟ್ಟಂತೆ ಪತ್ನಿಗೆ ಪರಿಹಾರ ನೀಡಲು ಪತಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಜಾಮೀನು ನೀಡಲಾಗುವುದು. ಪತ್ನಿ, ಆಕೆಯ ರಕ್ತ ಸಂಬಂಧಿಗಳು ಅಥವಾ ವಿವಾಹದ ಮೂಲಕ ಸಂಬಂಧಿಗಳಾದವರು ಯಾರಾದರೂ ದೂರಿತ್ತ ಪಕ್ಷದಲ್ಲಿ ಮಾತ್ರ ಪೋಲೀಸರು ಈ ಸಂಬಂಧ ಎಫ್ಐಆರ್ ದಾಖಲಿಸಬಹುದು.

ಇನ್ನು ತ್ರಿವಳಿ ತಲಾಕ್ ಒಂದು ಸೂಕ್ಷ್ಮ ವಿಚಾರವಾಗಿದ್ದು ಓರ್ವ ನ್ಯಾಯಾಧೀಶ ಪತಿ-ಪತ್ನಿಯರ ನಡುವಿನ ವಿವಾದ ಬಗೆಹರಿಸಲು ತನ್ನ ಪ್ರಯತ್ನ ಮಾಡುವುದಕ್ಕೆ ಅವಕಾಶವಿದೆ. ಪತ್ನಿ ಸಹ ನ್ಯಾಯಾಲಯಕ್ಕೆ ಹಾಜರಾದಾಗಲಷ್ಟೇ ಇದು ಸಂಭವಿಸಲಿದೆ.

ಒಂದು ಸಂಯುಕ್ತ ಅಪರಾಧವಾದ ತ್ರಿವಳಿ ತಲಾಕ್ ಅಪರಾಧದ ದೂರನ್ನು ಎರಡೂ ಪಕ್ಷಗಳು ಒಪ್ಪಿಕೊಂಡಲ್ಲಿ ಹಿಂಪಡೆಯುವುದಕ್ಕೆ ಸಹ ಅವಕಾಶವಿದೆ.ಈ ಕಾನೂನು ತ್ವರಿತ ತ್ರಿವಳಿ ತಲಾಕ್ ಅಥವಾ ‘ತಲಾಕ್-ಇ-ಬಿಡ್ಡತ್ ಗೆ ಮಾತ್ರ ಅನ್ವಯ.ಇನ್ನು ಸಂತ್ರಸ್ಥೆ ಅಥವಾ ಆಕೆ ಚಿಕ್ಕ ಮಕ್ಕಳಿಗೆ ಪರಿಹಾರ ಒದಗಿಸುವ ಅಧಿಕಾರವನ್ನು ಇದು ಆಯಾ ನ್ಯಾಯಾಧೀಶರಿಗೆ ಬಿಡುತದೆ. ಓರ್ವ ಮಹಿಳೆ ನ್ಯಾಯಾಧೀಶರ ಮೂಲಕ ಆಕೆಯ ಚಿಕ್ಕ ಮಕ್ಕಳ ಪಾಲನ್ನು ಪಡೆಯುವುದು ಸಾಧ್ಯ. ಈ ಸಂಬಂಧ ನ್ಯಾಯಾಧೀಶರ ತೀರ್ಮಾನ ಅಂತಿಮವಾಗಿರಲಿದೆ.

Triple talaq ordinance re-promulgated

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ