ಮೈತ್ರಿ ಪಕ್ಷಗಳಲ್ಲಿ ಮುಂದುವರಿದ ಸೀಟು ಹಂಚಿಕೆಯ ಹಗ್ಗ-ಜಗ್ಗಾಟ

ಬೆಂಗಳೂರು, ಜ.13-ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಗೆ ಸೀಟು ಹಂಚಿಕೆ ಹಗ್ಗ-ಜಗ್ಗಾಟ ಮುಂದುವರೆದಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಡಬೇಕೆಂದು ಜೆಡಿಎಸ್ ಕೇಳಿದೆ. ಇದರಲ್ಲಿ ಹಾಲಿ ಕಾಂಗ್ರೆಸ್ ಸಂಸದರಿರುವ 5 ಸ್ಥಾನಗಳನ್ನು ಜೆಡಿಎಸ್ ಕೇಳಿರುವುದು ಕಾಂಗ್ರೆಸ್‍ಗೆ ಇರಿಸು-ಮುರಿಸು ಉಂಟಾಗಿದ್ದು, ಯಾವುದೇ ಕಾರಣಕ್ಕೂ ಹಾಲಿ ಇರುವ ಕ್ಷೇತ್ರಗಳನ್ನು ಬಿಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಕೇಂದ್ರದಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಸೀಟು ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 12 ರಿಂದ 10 ಕ್ಷೇತ್ರಗಳ ಪಾಲು ಕೇಳುತ್ತಿದೆ.

ಹಾಲಿ ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್ ಕೇಳುತ್ತಿರುವುದು ಕಾಂಗ್ರೆಸ್‍ಗೆ ಚಿಂತೆಯ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ಕಾಂಗ್ರೆಸ್ ಗೆಲ್ಲಲು ಕಷ್ಟವಿರುವ 8 ಕ್ಷೇತ್ರಗಳನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ.

ಈ ಪೈಕಿ ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ಉತ್ತರ ಕನ್ನಡ, ಬೀದರ್ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

ಆದರೆ ಜೆಡಿಎಸ್‍ನವರು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳನ್ನೂ ಕೂಡ ಕೇಳುತ್ತಿದ್ದಾರೆ. ಇಲ್ಲಿ ಹಾಲಿ ಕಾಂಗ್ರೆಸ್ ಸಂಸದರಿದ್ದಾರೆ.ಅವರನ್ನು ಕೈ ಬಿಟ್ಟು ಜೆಡಿಎಸ್‍ನವರಿಗೆ ಟಿಕೆಟ್ ಕೊಡುವುದು ಕಷ್ಟವಾಗುತ್ತದೆ.8 ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಬಹುದು.ಈ ಅಂಶವನ್ನು ಹೈಕಮಾಂಡ್ ಗಮನಕ್ಕೂ ಕೂಡ ತರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ