ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕಾ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಮುಂಬರುವ 2020 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಆಗಿದ್ದಾರೆ.
ಸಿಎನ್ಎನ್ ಜೊತೆ ಮಾತನಾಡಿರುವ ಅವರು, ‘ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಮುಂದಿನ ವಾರದಲ್ಲಿ ನನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುತ್ತೇನೆ’ ಎಂದು ಹೇಳಿದರು.
ತುಳಸಿ ಗಬ್ಬಾರ್ಡ್ (37) ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಇವರು ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದರು. ಪ್ರಸ್ತುತ ಇವರು, ಅಮೆರಿಕಾ ಪ್ರಬಲ ಸಶಸ್ತ್ರ ಸೇವಾ ಸಮಿತಿ ಮತ್ತು ವಿದೇಶಾಂಗ ವ್ಯವಹಾರ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.
ನಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವುದರ ಹಿಂದೆ ಹಲವು ಕಾರಣಗಳಿವೆ. ಅಮೆರಿಕ ಪ್ರಜೆಗಳು ಆರೋಗ್ಯ ಸಮಸ್ಯೆಗಳು, ಹವಾಮಾನ ಬದಲಾವಣೆಯಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಾಂಗದಲ್ಲಿ ಅನೇಕ ಸುಧಾರಣೆಗಳು ಆಗಬೇಕಿವೆ. ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕಿದೆ. ಹೀಗಾಗಿ ಈ ದಿಟ್ಟ ನಿರ್ಧಾರ ಮಾಡಿದ್ದೇನೆ’ ಎಂದರು.
ಇನ್ನೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ತಮ್ಮ ಸ್ಫರ್ಧೆಯನ್ನು ಖಚಿತಪಡಿಸಿದ್ದಾರೆ.
‘ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧ ಅಂತ್ಯಗೊಳ್ಳುವಷ್ಟರಲ್ಲಿ ಸಹಾಯ ಮಾಡುವ ಅವಕಾಶ ಸಿಕ್ಕರೆ, ನಾನು ಆ ಜನರನ್ನು ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂದರು. ಪ್ರೀತಿಗಿಂತ ಹೆಚ್ಚು ಮತ್ತೊಂದು ಶಕ್ತಿಯಿಲ್ಲ. ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಪ್ರೀತಿಯ ಅಡಿಪಾಯ ಇದ್ದಾಗ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.