ಬೆಂಗಳೂರು,ಜ.12-ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಧೋರಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ತಮಿಳುನಾಡು-ಅತ್ತಿಬೆಲೆ ಗಡಿಭಾಗ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರಿಂದು ವಶಕ್ಕೆ ಪಡೆದರು.
ಆನೇಕಲ್ ಸಬ್ ಡಿವಿಷನ್ ಪೊಲೀಸರು, ಅತ್ತ ತಮಿಳುನಾಡು ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು. ಈ ನಡುವೆ ತಮಿಳುನಾಡು ಧೋರಣೆ ಖಂಡಿಸಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.ಈ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್‍ಉಂಟಾಗಿತ್ತು. ಪೊಲೀಸರು ಪ್ರತಿಭಟನಾನಿರತ ಹಲವು ಮುಖಂಡರನ್ನು ವಶಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್,ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಮೇಲೆ ತಮಿಳುನಾಡು ಸರ್ಕಾರ ಪದೇ ಪದೇ ದಾಳಿ ಮಾಡುತ್ತಿದೆ. ತಮಿಳುನಾಡಿನಲ್ಲಿ ಈ ಯೋಜನೆ ವಿರೋಧಿಸಿ ನಿರಂತರ ಹೋರಾಟ ಮಾಡುತ್ತಿರುವುದಲ್ಲದೆ, ಸಂಸತ್‍ನಲ್ಲಿ, ಸುಪ್ರೀಂಕೋರ್ಟ್‍ನಲ್ಲಿ ಹೋರಾಟ ಮಾಡುತ್ತಿದೆ. ಯಾವ ಕಾರಣಕ್ಕೆ ಎಂಬುದು ತಿಳಿಯುತ್ತಿಲ್ಲ ಎಂದು ಗುಡುಗಿದರು.
ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗುತ್ತದೆ. ವಿದ್ಯುಚ್ಛಕ್ತಿ ಉತ್ಪಾದನೆ ನಂತರದ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತದೆ. ಕುಡಿಯುವ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡಿಕೊಳ್ಳಲಾಗುತ್ತದೆ.ಇದರಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಆದರೂ ಅವರು ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ಕಾರಣಗಳಿಗೋಸ್ಕರ ಪ್ರತಿಭಟನೆ ನಡೆಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಅಲ್ಲದೆ ಯೋಜನೆಗೆ ಅಡ್ಡಿ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಸರ್ಕಾರವೂ ಕೂಡ ಈ ಯೋಜನೆಯನ್ನು ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಈ ಯೋಜನೆ ಆರಂಭಕ್ಕೆ ಯಾವ ನ್ಯಾಯಾಲಯವೂ ತಡೆಯಾಜ್ಞೆ ಕೊಟ್ಟಿಲ್ಲ. ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದ್ದರೂ ಕೂಡ ರಾಜ್ಯಸರ್ಕಾರ ಯೋಜನೆ ಪ್ರಾರಂಭಿಸದೆ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
ಕೂಡಲೇ ಯೋಜನೆ ಪ್ರಾರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಇಲ್ಲದಿದ್ದರೆ ಕನ್ನಡ ಪರ ಸಂಘಟನೆಗಳೊಂದಿಗೆ ಶಂಕು ಸ್ಥಾಪನೆ ನೆರವೇರಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಾ.ರಾ.ಗೋವಿಂದು, ಮಂಜುನಾಥ್‍ದೇವ್, ಗಿರೀಶ್‍ಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.