ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬದಿಗೆ ಸರಿಸಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳಲು ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮುಂದಾಗಿವೆ. ಸುದೀರ್ಘ 25 ವರ್ಷಗಳ ಬಳಿಕ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಬಿಜೆಪಿಯನ್ನು ಎದುರಿಸಲಿವೆ.
ಈ ಬಗ್ಗೆ ಇಂದು ಮಧ್ಯಾಹ್ನ ಲಕ್ನೋದ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಹಲವು ದಿನಗಳಿಂದ ಈ ಮೈತ್ರಿಯ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇದ್ದರೂ ಎರಡೂ ಪಕ್ಷದ ನಾಯಕರು ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ, ಎರಡೂ ಪಕ್ಷಗಳ ಇತರೆ ನಾಯಕರು ಈ ಸುದ್ದಿ ನಿಜ ಎಂದು ಒಪ್ಪಿಕೊಂಡಿದ್ದರು.
ಎಸ್ಪಿ ಹಾಗೂ ಬಿಎಸ್ಪಿ ರಾಜಕೀಯದ ಎದುರಾಳಿಗಳೆಂದೇ ಬಿಂಬಿತವಾಗಿದ್ದ ಪಕ್ಷಗಳು. ಈ ಮೊದಲು ಮುಲಾಯಂ ಸಿಂಗ್ ಯಾದವ್ ಮತ್ತು ಕಾನ್ಷಿರಾಮ್ ಒಂದಾಗಿ ಕೈಜೋಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರೀ ಅಂತರದ ಜಯ ಸಾಧಿಸಿದ್ದರು. ಅದಾದ ನಂತರ 25 ವರ್ಷಗಳ ಬಳಿಕ ಈ ಎರಡೂ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿ ಉತ್ತರಪ್ರದೇಶದಲ್ಲಿ ದಿಗ್ವಿಜಯ ಸಾಧಿಸುವ ತಯಾರಿಯಲ್ಲಿವೆ.
ಇಂದು ಮಧ್ಯಾಹ್ನ ಜಂಟಿ ಸುದ್ದಿಗೋಷ್ಠಿ ನಡೆಸಲಿರುವ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ತಮ್ಮ ಮೈತ್ರಿಯನ್ನು ಖಚಿತಗೊಳಿಸಲಿದ್ದಾರೆ. ಈ ಮೊದಲು ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಮುಂದಾಗಿದ್ದವು. ಅದರಲ್ಲಿ ಎಸ್ಪಿ ಮತ್ತು ಬಿಎಸ್ಪಿ ಕೂಡ ಸೇರ್ಪಡೆಗೊಂಡಿತ್ತು. ಆದರೆ, ಬಳಿಕ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಲಾರಂಭಿಸಿದ ಮಾಯಾವತಿ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದರು. ಅದೇರೀತಿ, ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.
ದೇಶದಲ್ಲಿ ಅತ್ಯಂತ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಬಿಜೆಪಿಗೆ ಏನಿಲ್ಲವೆಂದರೂ 25ರಿಂದ 30 ಸ್ಥಾನಗಳು ನಷ್ಟವಾಗುವುದು ಖಚಿತ ಎನ್ನಲಾಗುತ್ತಿದೆ. 2014ರಲ್ಲಿ ಎನ್ಡಿಎ ಉತ್ತರಪ್ರದೇಶದ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆದ್ದಿತ್ತು. ಇದು ಎನ್ಡಿಎ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಹಳ ಪ್ರಮುಖ ಅಂಶವಾಗಿತ್ತು. ಈ ಬಾರಿಯೂ ಉತ್ತರಪ್ರದೇಶದ ಗೆಲುವು ಕೇಂದ್ರದಲ್ಲಿ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬುದಕ್ಕೆ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಈ ಮೈತ್ರಿ ಸಂಕಷ್ಟವನ್ನೇ ತಂದಿಟ್ಟಿದೆ ಎನ್ನಬಹುದು.
ತಮ್ಮ ಪಕ್ಷವನ್ನು ಬಿಟ್ಟು ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಇದೊಂದು ಅಪಾಯಕಾರಿ ನಿರ್ಧಾರ ಎಂದಿದ್ದಾರೆ. ನಮ್ಮನ್ನು ನಿರ್ಲಕ್ಷಿಸಿ ಆ ಎರಡೂ ಪಕ್ಷಗಳ ನಾಯಕರು ತಪ್ಪು ಮಾಡುತ್ತಿದ್ದಾರೆ. ಇದಕ್ಕೆ ಈಗಲೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಉತ್ತರಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಸಿದ್ಧವಿದೆ ಎಂದಿದ್ದಾರೆ.