ಲೋಕಸಭಾ ಚುನಾವಣೆ ಹಿನ್ನಲೆ: ಎಸ್ಪಿ-ಬಿಎಸ್ ಪಿ ಮೈತ್ರಿ; ಅಧಿಕೃತ ಘೋಷಣೆ

ಲಖನೌ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲಿಸಲು ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮೈತ್ರಿಗೆ ಸಜ್ಜಾಗಿದ್ದು, ನಾಳೆ ಎರಡೂ ಪಕ್ಷಗಳು ಅಧಿಕೃತವಾಗಿ ಘೋಷಣೆ ಮಾಡಲಿವೆ.

ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ಅಧಿನಾಯಕಿ ಮಾಯಾವತಿ ನಾಳೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದು, ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

ಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಈ ವಿಷಯ ತಿಳಿಸಿದ್ದಾರೆ.ಲಕ್ನೋದಲ್ಲಿ ನಾಳೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದಿದ್ದಾರೆ.

ಎರಡು ಪಕ್ಷಗಳ ನಡುವಣ ಮೈತ್ರಿ, ಸ್ಥಾನ ಹಂಚಿಕೆ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಬೆಂಬಲ ಕುರಿತೂ ಮಾಹಿತಿ ನೀಡಲಿದ್ದು, ಕಾಂಗ್ರೆಸ್ನನ್ನು ಈ ಮೈತ್ರಿಕೂಟದಿಂದ ದೂರವಿಡಲು ನಿರ್ಧರಿಸಿರುವ ಉಭಯ ಪಕ್ಷಗಳು ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಿವೆ.

80 ಸದಸ್ಯ ಬಲದ ಉತ್ತರ ಪ್ರದೇಶ ಲೋಕಸಭಾ ಸ್ಥಾನಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿ ತಲಾ 35 ಸ್ಥಾನಗಳಲ್ಲಿ ಸ್ಪರ್ಧಿಸುವ ಸೀಟು ಹಂಚಿಕೆಗೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ. ಉಳಿದ 10 ಸ್ಥಾನಗಳನ್ನು ತಮ್ಮ ಮೈತ್ರಿಕೂಟದ ಪ್ರಾದೇಶಿಕ ಪಕ್ಷಗಳಿಗೆ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ