ಬೆಂಗಳೂರು, ಜ.12- ಕರ್ನಾಟಕ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸುವ ಯೋಜನೆಯನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ವಾಗತಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಾವಳ್ಳಿ ಶಂಕರ್, ಈಗಾಗಲೇ ರಾಜ್ಯದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಅವಕಾಶಗಳನ್ನು ಹೆಚ್ಚು ಗಳಿಸುತ್ತಿದ್ದಾರೆ. ಈ ಅಸಮತೋಲನ ನಿವಾರಿಸಲು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಪರಿಸರಕ್ಕೆ ಸೂಕ್ತವಾಗುವಂತೆ ಇಂಗ್ಲಿಷ್ ಮಾಧ್ಯಮವನ್ನು ಹಂತ ಹಂತವಾಗಿ ಜಾರಿಗೊಳಿಸುವುದು ಈ ಕಾಲದ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮೊದಲ ಹಂತವಾಗಿ ಪ್ರತಿ ಹೋಬಳಿಗೆ ಒಂದರಂತೆ ಸರ್ಕಾರಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸಬೇಕು. ಈಗಾಗಲೇ ಆರಂಭಿಸಿರುವ ಹಿರಿಯ ಪ್ರಾಥಮಿಕ ಮಟ್ಟದ ಕುವೆಂಪು ಮಾದರಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿ ಶಾಲೆಗಳು ಮುಚ್ಚುತ್ತಿರುವುದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಿದೆ.ಇದರ ನೇರ ಹೊಡೆತ ಗ್ರಾಮೀಣ ವಿದ್ಯಾವಂತರ ಮೇಲೆ ಬೀಳುತ್ತಿದ್ದು, ಗ್ರಾಮೀಣ ನಿರುದ್ಯೋಗ ಮತ್ತಷ್ಟು ಹೆಚ್ಚುತ್ತಿದೆ ಎಂದು ತಿಳಿಸಿದರು.
ಆರ್ಟಿಇ ಕಾಯ್ದೆ ಪ್ರಕಾರ, ಖಾಸಗಿ ಶಾಲೆಗಳಿಗೆ ವೆಚ್ಚ ಮಾಡುತ್ತಿರುವ ಅನುದಾನಕ್ಕೆ ಸಮಾನವಾದ ಅನುದಾನವನ್ನು ಸರ್ಕಾರಿ ಶಾಲೆಗಳ ಕಟ್ಟಡ, ಪೀಠೋಪಕರಣ, ಕಲಿಕೆಯಲ್ಲಿ ದೃಶ್ಯ ಶ್ರವಣ ಮಾಧ್ಯಮಗಳ ಹೆಚ್ಚಿನ ಬಳಕೆಗಾಗಿ ಮೀಸಲಿಡಬೇಕಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಬಿ.ಗೋಪಾಲ್, ಚನ್ನಕೃಷ್ಣಯ್ಯ, ತಿಪ್ಪೇಶ್, ಡಾ.ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.