ಬೆಂಗಳೂರು, ಜ.12-ಬ್ಯಾಂಕ್ವೊಂದರಲ್ಲಿ ಅಟೆಂಡರ್ ವೃತ್ತಿ ಮಾಡುತ್ತಿದ್ದ ಇಬ್ಬಲೂರಿನ ನಿವಾಸಿ ದೊಡ್ಡಮುನಿಯಪ್ಪ ಇಂದು ಬೆಳಗ್ಗೆ 10.30ರ ಸಮಯದಲ್ಲಿ ಇಬ್ಬಲೂರು ಜಂಕ್ಷನ್ ಬಳಿಯ ಫ್ಲೈಓವರ್ ಸಮೀಪ ರಸ್ತೆ ದಾಟುತ್ತಿದ್ದರು.
ಈ ವೇಳೆ ಅತಿವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ದೊಡ್ಡಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಉದ್ರಿಕ್ತರಿಂದ ಸಿಮೆಂಟ್ ಮಿಕ್ಸರ್ ಲಾರಿಗೆ ಕಲ್ಲು ತೂರಾಟ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಲಾರಿಗೆ ಬೆಂಕಿ ಹಚ್ಚಲು ಯತ್ನಿಸಿದರು.
ಬೆಳಗ್ಗೆಯೇ ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಮೂರು ಕಿ.ಮೀ. ದೂರದವರೆಗೆ ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುವಂತಾಯಿತು.
ಸುದ್ದಿ ತಿಳಿದ ಬೆಳ್ಳಂದೂರು ಹಾಗೂ ಎಚ್ಎಸ್ಆರ್ ಲೇಔಟ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರತಿಭಟನಾ ನಿರತರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಎಚ್ಎಸ್ಆರ್ಲೇಔಟ್ ಸಂಚಾರಿ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.