
ನವದೆಹಲಿ, ಜ.11: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನುಷ್ಠಾನದಲ್ಲಿ ಕೇಂದ್ರ ಸರ್ಕಾರದಿಂದ ಸೃಷ್ಟಿಯಾಗಿದ್ದ ಗೊಂದಲ ಮತ್ತು ಕಿರಿಕಿರಿಯನ್ನು ನಿವಾರಿಸಿದ ಹೆಗ್ಗಳಿಕೆ ಕಾಂಗ್ರೆಸ್ ಆಡಳಿತವಿರುವ ಆರು ರಾಜ್ಯಗಳಿಗೆ ಸಲ್ಲುತ್ತದೆ ಎಂದು ಪಕ್ಷದ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತ ಇರುವ ಆರು ರಾಜ್ಯಗಳ ಹಣಕಾಸು ಸಚಿವರು ಜಿಎಸ್ಟಿ ಮಂಡಳಿಗೆ ಏಕರೂಪದ ತೆರಿಗೆ ಪದ್ದತಿ ಅನುಷ್ಠಾನದಲ್ಲಿ ನೆರವಾಗಿದ್ದಾರೆ. ಈ ಮೂಲಕ ಗೊಂದಲವನ್ನು ನಿವಾರಿಸುವಲ್ಲಿ ಸಹಾಯ ಮಾಡಿದ್ದಾರೆ ಎಂದು ಚಿದು ಟ್ವೀಟರ್ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಜಿಎಸ್ಟಿ ವಿನಾಯಿತಿ ಮಿತಿ ದುಪ್ಪಟ್ಟು ಕ್ರಮವನ್ನು ಪ್ರಸ್ತಾಪಿಸಿರುವ ಚಿದು, ಇದರ ಹಿಂದೆ ಕಾಂಗ್ರೆಸ್ ರಾಜ್ಯಗಳ ವಿತ್ತ ಮಂತ್ರಿಗಳ ಶ್ರಮವೂ ಇದೆ ಎಂದು ಹೇಳಿದ್ದಾರೆ.