ಬೆಂಗಳೂರು, ಜ.11- ಐಟಿ ಭೂತ ಕನ್ನಡ ಚಿತ್ರರಂಗದ ನಟರನ್ನು ಮತ್ತಷ್ಟು ಕಾಡತೊಡಗಿದೆ.ನಿನ್ನೆ ಚಿತ್ರನಟ ಯಶ್ ಅವರ ಆಡಿಟರ್ ಕಚೇರಿ, ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ದೊರೆತ ಡೈರಿಯಿಂದ ಮತ್ತಷ್ಟು ನಿರ್ಮಾಪಕರು, ನಟರಿಗೆ ಐಟಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ವಾರ ಚಿತ್ರನಟ ಯಶ್, ಪುನಿತ್ ರಾಜ್‍ಕುಮಾರ್, ಸುದೀಪ್, ಶಿವರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಜಯಣ್ಣ ಅವರ ಕಚೇರಿ, ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಸತತ ಮೂರು ದಿನಗಳ ಕಾಲ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.ಐಟಿ ಅಧಿಕಾರಿಗಳ ದಿಢೀರ್ ದಾಳಿಯಿಂದ ಚಂದನವನ ಬೆಚ್ಚಿಬಿದ್ದಿತ್ತು.
ದಾಳಿಗೊಳಗಾದ ಎಲ್ಲ ನಾಯಕ ನಟರು, ನಿರ್ಮಾಪಕರಿಗೆ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದ ಬೆನ್ನಲ್ಲೇ ಹಲವರು ವಿಚಾರಣೆಗೆ ಹಾಜರಾಗಿದ್ದರು. ಇನ್ನೂ ಕೆಲವರು ಸಮಯಾವಕಾಶ ಕೋರಿದ್ದರು.ಈ ಬೆನ್ನಲ್ಲೇ ಯಶ್ ಅವರ ಆಡಿಟರ್ ಮನೆ ಮೇಲೆ ದಾಳಿ ನಡೆಸಿದಾಗ ನಟರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಸೇರಿದಂತೆ 12 ಜನರ ಆಡಿಟ್‍ಅನ್ನು ಇವರೊಬ್ಬರೇ ಮಾಡುತ್ತಿದ್ದು, ಅವರ ಎಲ್ಲ ದಾಖಲೆಗಳು ಹಾಗೂ ಮಾಹಿತಿಗಳು ಇವರ ಬಳಿ ದೊರೆತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 12 ಜನರ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸುವ ಸಂಭವವಿದೆ ಎಂದು ತಿಳಿದುಬಂದಿದೆ.