ಬೆಂಗಳೂರು: ಮಲೇಷ್ಯಾ ದೇಶದ ಕೆಡಿಲಾನ್ ರಖ್ಯಾತ್ ಪಕ್ಷದ ಅಧ್ಯಕ್ಷ ಅನ್ವರ್ ಬಿನ್ ಇಬ್ರಾಹಿಂ ನೇತೃತ್ವದ ಸಂಸದರ ನಿಯೋಗವು ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭಧಲ್ಲಿ ಮಾತನಾಡಿದ ಇಬ್ರಾಹಿಂ ಅವರು ಇಂದು ಮಾಹಿತಿ ತಂತ್ರಜ್ಞಾನ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ವಲಯವಾಗಿದೆ. ಈ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಬೆಂಗಳೂರಿನ ಸಾಧನೆ ಅತ್ಯುನ್ನತವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ನಿಮ್ಮಂತೆಯೇ ರೈತರು, ಜನಸಾಮಾನ್ಯರ ಅಭಿವೃದ್ಧಿ ಪರ ನಿಲುವು ಹೊಂದಿದ್ದರೂ, ದೇಶದ ಆರ್ಥಿಕ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನ, ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದು ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ರಾಜ್ಯ ಸರ್ಕಾರ ರೂಪಿಸಿರುವ ನೀತಿಗಳ ಕುರಿತು ಚರ್ಚಿಸಿದರು. ಮಲೇಷ್ಯಾವು ರಾಜ್ಯದ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
ಇದೇ ರೀತಿ ಮಲೇಷ್ಯಾದಲ್ಲಿ ಸ್ಥಾಪಿಸಲಾಗುತ್ತಿರುವ ಮಲ್ಟಿ ಮೀಡಿಯಾ ಕಾರಿಡಾರ್ನಲ್ಲಿ ಅವಕಾಶಗಳು ಹೇರಳವಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಮಾಹಿತಿ ತಂತ್ರಜ್ಞಾನ ವಲಯಕ್ಕೆ ನೀಡುತ್ತಿರುವ ಉತ್ತೇಜನದ ಕುರಿತು ಮಾಹಿತಿ ನೀಡಿದರಲ್ಲದೆ, ಇದೇ ನವೆಂಬರ್ನಲ್ಲಿ ನಡೆಯುವ ಟೆಕ್ ಸಮ್ಮಿಟ್ನಲ್ಲ ಪಾಲ್ಗೊಳ್ಳುವಂತೆ ಶ್ರೀ ಇಬ್ರಾಹಿಂ ಅವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ ಕಂಪೆನಿಗಳನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೈಗಾರಿಕಾ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.