ಬೆಂಗಳೂರು: ನಗರದ ಅಭಿವೃದ್ಧಿ ಸಂಬಂಧಿತ ಯೋಜನೆಗಳಿಗೆ ಆರ್ಥಿಕ ಅಥವಾ ತಾಂತ್ರಿಕ ಸಹಕಾರ ನೀಡಲು ಇಚ್ಛೆ ಇದ್ದರೆ ಅದಕ್ಕೆ ನಮ್ಮ ಸರಕಾರ ಸಂಪೂರ್ಣ ಸ್ವಾಗತಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಲೇಶಿಯಾ ಎಂಪಿ ಹಾಗೂ ಪ್ರಮುಖ ರಾಜಕೀಯ ನಾಯಕರಾದ ಡಾಟೋ ಸೆರಿ ಅಬ್ರಾಹ್ಮಿಂ ಸೇರಿ 11 ಸದಸ್ಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಐಟಿ-ಬಿಟಿಯಲ್ಲಿ ಮುಂಚೂಣಿಯಲ್ಲಿದೆ. 80 ರ ದಶಕದಿಂದಲೇ ಐಟಿಬಿಟಿ ನಗರದಲ್ಲಿ ತಲೆ ಎತ್ತಿದ್ದು, ಇಂದು ಶೇ.80 ರಷ್ಟು ಪ್ರತಿಷ್ಠಿತ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ಕೇಂದ್ರ ತೆರೆದಿವೆ.
ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಸ್ಟಾರ್ಟ್ಅಪ್ ಪಾಲಿಸಿಯನ್ನು ತಂದಿದೆ. ಜೊತೆಗೆ ಐಟಿ ಪಾಲಿಸಿಯು ಇದ್ದು, ಟೆಕ್ನಾಲಜಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ 50 ಸಾವಿರಕ್ಕು ಹೆಚ್ಚು ಎಂಜಿನಿಯರ್ಸ್ಗಳು ಉತ್ತೀರ್ಣರಾಗಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ವಿದೇಶದಲ್ಲಿ ಇರುವ ಇಂಜಿನಿಯರ್ಸ್ಗಳಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ಇತ್ತೀಚೆಗೆ ಬಯೋ ಟೆಕ್ನಾಲಜಿ ಪಾಲಿಸಿಯನ್ನು ನಮ್ಮಸರಕಾರ ತಂದಿದೆ. ಒಟ್ಟಾರೆ ತಂತ್ರಜ್ಞಾನ ಕ್ಷೇತ್ರಕ್ಕೆ ನಮ್ಮಸರಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದರು.
ಬೆಂಗಳೂರಿನಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇಂಥ ದೊಡ್ಡ ಯೋಜನೆಗಳನ್ನು ನಮ್ಮಸರಕಾರ ಅಭಿವೃದ್ಧಿ ದೃಷ್ಟಿಯಿಂದ ಕೈಗೆತ್ತಿಕೊಳ್ಳುತ್ತಿದೆ.
ಇಂಥ ಅಭಿವೃದ್ಧಿ ಯೋಜನೆಗೆ ನಮ್ಮ ಸರಕಾರದೊಂದಿಗೆ ಕೈ ಜೋಡಿಸಲು ನಿಮಗೆ ಇಚ್ಛೆ ಇದ್ದರೆ ಇದಕ್ಕೆ ನಮ್ಮ ಸಹಕಾರ ಸಂಪೂರ್ಣವಿರಲಿದೆ. ಮಲೇಷಿಯಾದಲ್ಲಿ ಅತ್ಯಂತ ಗುಣಮಟ್ಟದ ಕಾರಿಡಾರ್, ಫ್ಲೈಓವರ್ಗಳನ್ನು ನಾನು ಕಂಡಿದ್ದೇನೆ. ಅದೇ ಮಾದರಿಯ ಅಭಿವೃದ್ಧಿ ಇಲ್ಲಿಯೂ ಮಾಡಲು ಮುಂದಾಗಿದ್ದೇವೆ. ಇದಕ್ಕೆ ನಿಮ್ಮ ಸಹಕಾರ ಮುಖ್ಯ ಎಂದರು.