ಬೆಂಗಳೂರು : ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆಗೆ ಅನುಕೂಲವಾಗುವ ಹೊಸ ಪದ್ಧತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳ ಸುರಕ್ಷತೆಗೆ ಹೊಸ ಡಿಜಿಟಲ್ ಟೋಕನ್ ಪದ್ಧತಿಯನ್ನು ಅಳವಡಿಸಲು RBI ಅನುಮತಿ ನೀಡಿದೆ. ಇದು ನಿರಾತಂಕವಾಗಿ ಕಾರ್ಡ್ ಬಳಕೆಗೆ ಹಾದಿ ಸುಗಮಗೊಳಿಸಲಿದ್ದು, ನಗದುರಹಿತ ವರ್ಗಾವಣೆಗಳಿಗೆ ಪುಷ್ಟಿ ನೀಡಲಿದ್ದು, ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.
ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ವೇಳೆ, ಕಾರ್ಡ್ ಸಂಖ್ಯೆಯ ಬದಲಿಗೆ ಬ್ಯಾಂಕ್‌ಗಳು ಬಿಡುಗಡೆಗೊಳಿಸುವ 16 ಅಂಕಿಗಳ ಕೋಡ್ ಬಳಕೆಯಾಗಲಿದೆ. ಇದರಿಂದಾಗಿ ನಿಮ್ಮ ಕಾರ್ಡ್‌ನ ಮಾಹಿತಿ ಸೋರಿಕೆಯಾಗುವ ಅಪಾಯ ಇರುವುದಿಲ್ಲ. ಕಾರ್ಡ್‌ಗಳು ಸೈಬರ್ ದಾಳಿಗೆ ಗುರಿಯಾಗುವ ಅಪಾಯವನ್ನೂ ತಡೆಯಬಹುದು.
ಮುಖ್ಯವಾಗಿ ಥಾಯ್ಲೆಂಡ್‌ನಂಥ ರಾಷ್ಟ್ರಗಳಿಗೆ ಪ್ರಯಾಣ ಮಾಡುವ ಸಂದರ್ಭ ಇದು ಸಹಕಾರಿ. ಥಾಯ್ಲೆಂಡ್ ಹಾಗೂ ಇತರ ಕೆಲ ರಾಷ್ಟ್ರಗಳಲ್ಲಿ ಪಬ್, ಹೋಟೆಲ್‌ಗಳಲ್ಲಿ ಕಾರ್ಡ್‌ಗಳ ಡೇಟಾ ಕಳ್ಳತನದ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿವೆ. ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳ ಮೂಲಕ ಇ-ಸಿಗರೇಟ್, ದುಬಾರಿ ಸೈಕಲ್‌ಗಳ ಬಿಡಿ ಭಾಗ, ದ್ರೋನ್ ಇತ್ಯಾದಿಗಳ ಖರೀದಿಯ ವೇಳೆ ನಡೆಸುವ ಡಿಜಿಟಲ್ ಪೇಮೆಂಟ್ ಕೆಲವು ಸಲ ಸಮಸ್ಯೆ ಸೃಷ್ಟಿಸಬಹುದು. ಆದರೆ ಇದನ್ನು ತಪ್ಪಿಸಲು ಡಿಜಿಟಲ್ ಟೋಕನ್ ಸಹಕಾರಿ ಎನ್ನುತ್ತಾರೆ ತಜ್ಞರು.
ಈ ಡಿಜಿಟಲ್ ಟೋಕನ್‌ಗಳು ಅತ್ಯಧಿಕ ಭದ್ರತೆಯ ಅಂಶಗಳನ್ನು ಒಳಗೊಂಡಿದ್ದು, ಒಂದು ಸಲ ಟೋಕನ್ ಬಿಡುಗಡೆಯಾದ ನಂತರ ಬಳಕೆದಾರ ಹೊರತುಪಡಿಸಿ, ಬ್ಯಾಂಕ್ ಸಿಬ್ಬಂದಿ ಸೇರಿ ಬೇರೆ ಯಾರಿಗೂ ಅದನ್ನು ಭೇದಿಸಿ, ಮೂಲ ಕಾರ್ಡ್‌ನ ಸಂಖ್ಯೆ ಪತ್ತೆ ಹಚ್ಚಲು ಸಾಧ್ಯವಿಲ್ಲ. ಜತೆಗೆ ಪ್ರತಿ ವರ್ಗಾವಣೆಯಲ್ಲೂ ಈ 16 ಅಂಕಿಗಳು ಬದಲಾಗುತ್ತಿರುತ್ತವೆ.
ಇದುವರೆಗೆ ಯುಪಿಐ ಮತ್ತು ಐಎಂಪಿಎಸ್ ವಿಧಾನದಲ್ಲಿ ಇಂಥ ಸುರಕ್ಷತಾ ಕ್ರಮ ಇತ್ತು. ಇದೀಗ ಕಾರ್ಡ್ ಬಳಕೆಯಲ್ಲೂ ಲಭಿಸಲಿದೆ. ಇಎಂವಿ ಕಾರ್ಡ್ ಪಿನ್ ಬಳಕೆಯಿಂದ ಎಟಿಎಂಗಳಲ್ಲಿ ಸೈಬರ್ ದಾಳಿ ಅಪಾಯ ಕಡಿಮೆಯಾಗಿದೆ. ಆನ್‌ಲೈನ್ ಸಾಧನಗಳಲ್ಲಿ ಕಾರ್ಡ್ ಬಳಕೆಯ ವೇಳೆ ಸುರಕ್ಷತೆಗೆ ಈ ಟೋಕನ್ ಪದ್ಧತಿ ಉಪಯುಕ್ತವಾಗಲಿದೆ.