ಬೆಂಗಳೂರು, ಜ.11-ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು, ಮೀನುಗಾರರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿಲ್ಲ ಎಂಬ ಅನುಮಾನಗಳಿವೆ. ಈವರೆಗೂ ಒಂದು ಕ್ಯಾನ್ ಮಾತ್ರ ಪತ್ತೆಯಾಗಿದೆ. ಮೀನುಗಾರರು ಧರಿಸುತ್ತಿದ್ದ ರಕ್ಷಣಾ ಕವಚ ಬೋಟ್ನ ಹಲಗೆಗಳು, ನೀರು ಹಾಗೂ ಇತರ ಸಾಮಗ್ರಿಗಳನ್ನು ತುಂಬಿರುತ್ತಿದ್ದ ಕ್ಯಾನ್ಗಳು ಪತ್ತೆಯಾಗಿಲ್ಲ.
ಸಾಮಾನ್ಯವಾಗಿ ಹಡಗು ಏಕಾಏಕಿ ಮುಳುಗುವುದಿಲ್ಲ.ಮುಳುಗಲು 45 ನಿಮಿಷದಿಂದ 1 ಗಂಟೆಯವರೆಗೂ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಹಡಗು ಮುಳುಗಿದ್ದೇ ಆದರೆ, ಆ ಸಮಯದಲ್ಲಿ ಮೀನುಗಾರರು ಕುಟುಂಬದ ಸದಸ್ಯರಿಗೆ ಅಥವಾ ತಮ್ಮ ಸಂಬಂಧಕರಿಗೆ ಸಂದೇಶ ಕಳುಹಿಸುತ್ತಿದ್ದರು. ಇದುವರೆಗೂ ಅಂತಹ ಯಾವುದೇ ಸಂದೇಶ ಬಂದಿಲ್ಲ. ಒಂದೇ ಒಂದು ಸಂದೇಶ ರವಾನೆಯಾಗಿದ್ದು, ನೆಟ್ವರ್ಕ್ ಸಿಗದ ಕಾರಣ ವಿಳಂಬವಾಗಿ ಸಂಬಂಧಿಕರಿಗೆ ತಲುಪಿದೆ.ಅದು ಎಲ್ಲಿಂದ ರವಾನೆಯಾಗಿದೆ ಎಂಬ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ದೇವೆ ಎಂದರು.
ಮೀನುಗಾರರ ಕುಟುಂಬದ ಸದಸ್ಯರ ಅಭಿಪ್ರಾಯದಂತೆ ಹಡಗು ಮುಳುಗಿಲ್ಲ. ಮಹಾರಾಷ್ಟ್ರ ಹಾಗೂ ಇತರ ಗಡಿಭಾಗದಲ್ಲಿ ಕೆಲವು ಗೂಂಡಾಗಳು ಇವರನ್ನು ಅಪಹರಿಸಿರುವ ಸಾಧ್ಯತೆ ಇದೆ. ಈ ಹಿಂದೆಲ್ಲ ಈ ರೀತಿ ಅಪಹರಣಗಳಾಗಿವೆ. ಒಂದಷ್ಟು ದಿನ ಬಲವಂತವಾಗಿ ಹಿಡಿದಿಟ್ಟುಕೊಂಡು ಅವರ ಬೋಟ್ಗಳನ್ನು ಕಿತ್ತುಕೊಂಡು ನಂತರ ವಾಪಸ್ ಕಳುಹಿಸಿರುವ ಘಟನೆಗಳು ನಡೆದಿವೆ.ಈಗಲೂ ಅದೇ ಮಾದರಿಯ ಘಟನೆ ನಡೆದಿರಬಹುದು ಎಂಬ ಶಂಕೆಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಅವರ ಅನುಮಾನ ನಿಜವಾಗಿರಲಿ ಎಂಬುದು ನಮ್ಮ ಆಶಯ. ಹಡಗು ಮುಳುಗದೆ ಇದ್ದರೆ ಮೀನುಗಾರರು ಎಲ್ಲೇ ಜೀವಂತವಾಗಿದ್ದರೂ ಅವರನ್ನು ಹುಡುಕಿ ವಾಪಸ್ ಕರೆತರಲು ನಮಗೆ ಸಾಧ್ಯವಾಗುತ್ತದೆ. ಅವರನ್ನು ಹುಡುಕುವ ಸಲುವಾಗಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ನಮ್ಮ ಪೆÇಲೀಸರು, ಕೇಂದ್ರ ಸರ್ಕಾರದ ನೌಕಾಪಡೆ ಸಾಕಷ್ಟು ಶೋಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರದ ಅಧೀನಕ್ಕೊಳಪಡುವ ಸಮುದ್ರ ಭಾಗದಲ್ಲಿ ಈ ಘಟನೆ ನಡೆದಿರುವುದಿಂದ ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಕಾರ್ಯಾಚರಣೆ ನಡೆಸಬೇಕಿದೆ. ನಿನ್ನೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಯಾಗಿದ್ದು, ನಮ್ಮ ಗೃಹ ಸಚಿವರು ಮಹಾರಾಷ್ಟ್ರ-ಗೋವಾ ಸಚಿವರ ಜೊತೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.ಕೇಂದ್ರ ಸರ್ಕಾರದಿಂದಲೂ ಇನ್ನಷ್ಟು ಸಹಾಯ ಪಡೆಯಲು ಒತ್ತಡ ಹೇರಲು ನಿರ್ಧರಿಸಲಾಗಿದೆ.ಜನರ ನಿರೀಕ್ಷೆಯಂತೆ ದೋಣಿ ಮುಳುಗದೆ ಅಪಹರಣವಾಗಿದ್ದರೆ ಅವರನ್ನು ಹುಡುಕಿ ವಾಪಸ್ ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದು ಸಚಿವರು ಹೇಳಿದರು.