
ಗ್ಲಾಸ್ಗೋವ್, ಜ.11- ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.
ಟೆನ್ನಿಸ್ ಲೋಕವನ್ನು ತಮ್ಮ ಉಸಿರನ್ನಾಗಿಸಿಕೊಂಡಿದ್ದ ಮುರ್ರೆ ಕೆಲವು ದಿನಗಳಿಂದ ಪೃಷ್ಟ (ಹಿಪ್) ನೋವಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೂ ಒಳಗಾಗಿರುವುದರಿಂದ ಮುಂಬರುವ ಆಸ್ಟ್ರೇಲಿಯಾ ಓಪನ್ನ ನಂತರ ಟೆನ್ನಿಸ್ ಜೀವನಕ್ಕೆ ಗುಡ್ಬೈ ಹೇಳುವುದಾಗಿ ಸುದ್ದಿಗಾರರೊಂದಿಗೆ ನೋವಿನಿಂದಲೇ ತಿಳಿಸಿದ್ದಾರೆ.
ಟೆನ್ನಿಸ್ ಲೋಕದಲ್ಲಿ ನಂಬರ್ 1 ಆಟಗಾರನಾಗಿ ಗುರುತಿಸಿಕೊಂಡು ಮೂರು ಬಾರಿ ಗ್ರ್ಯಾಂಡ್ ಸ್ಲಮ್ ವಿಜೇತರಾಗಿರುವ ಮುರ್ರೆ ನಾನು ಕೆಲವು ಪ್ರಮುಖ ಟೂರ್ನಿಗಳಲ್ಲಿ ಮಾತ್ರ ಪಾಲ್ಗೊಳ್ಳಲು ನಿರ್ಧರಿಸಿದ್ದೆ, ಆದರೆ ನನ್ನ ಪೃಷ್ಟ (ಹಿಪ್) ನೋವು ಅದಕ್ಕೂ ಸಹಕರಿಸುತ್ತಿಲ್ಲ , ನಾನು ಟೆನ್ನಿಸ್ ಅಂಕಣದಲ್ಲಿ ಕಳೆದ ಒಂದೊಂದು ಕ್ಷಣವು ಅಮೂಲ್ಯವಾದದ್ದು ಎಂದು 77 ವರ್ಷಗಳ ನಂತರ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಬ್ರಿಟಿಷ್ ಆಟಗಾರ ಮರ್ರೆ ತಿಳಿಸಿದ್ದಾರೆ.
ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್, ನೋವಿಕ್ ಡಿಕೊವಿಚ್, ರಫೇಲ್ ನಡಾಲ್ರಂತವರ ಸವಾಲಿನ ನಡುವೆಯೂ ತಮ್ಮದೇ ಆದ ಆಧಿಪತ್ಯವನ್ನು ಸ್ಥಾಪಿಸಿದ ಮರ್ರೆ ಕಳೆದ ವರ್ಷ ಆಸ್ಟ್ರೇಲಿಯಾ ಒಪನ್ ಟೂರ್ನಿಯ ವೇಳೆ ಪೃಷ್ಟ (ಹಿಪ್) ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.