ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಮ್ಹಾನ್ಸ್ಗೆ ಭೇಟಿ ನೀಡಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದನೆನ್ನಲಾದ ಯುವಕ ವೇಣುಗೋಪಾಲನ ಆರೋಗ್ಯ ವಿಚಾರಿಸಿ ಸ್ಥೈರ್ಯ ತುಂಬಿದರು.
ಟೇಲರಿಂಗ್ ವೃತ್ತಿ ಮಾಡುತ್ತಿದ್ದ ತಾಯಿ ಎಸ್ಎಸ್ಎಲ್ಸಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ ವೇಣುಗೋಪಾಲ್ ಪರೀಕ್ಷೆ ಬರೆದು ತೇರ್ಗಡೆಯಾಗುವಂತೆ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ವೇಣುಗೋಪಾಲನಿಗೆ ಬುದ್ಧಿ ಹೇಳಿದ ಮುಖ್ಯಮಂತ್ರಿಗಳು, ಹೆತ್ತವರು ಹೇಳಿದ ಮಾತಿಗೆ ನೊಂದುಕೊಂಡು ಇಂತಹ ಕ್ರಮ ಕೈಗೊಳ್ಳುವುದು ಸರಿಯಲ್ಲ; ಹೆತ್ತವರ ಇಂತಹ ಬುದ್ಧಿಮಾತುಗಳ ಹಿಂದಿನ ಕಾಳಜಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಯುವಕ ತಾನು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ನಂಗೆ ಆ ಕ್ಷಣದಲ್ಲಿ ಏನಾಯಿತೊ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಮಕ್ಕಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸ ಮಾಡುವ ವಾತಾವರಣವನ್ನು ಶಾಲೆ/ ಕಾಲೇಜುಗಳು ಹಾಗೂ ಹೆತ್ತವರು ನಿರ್ಮಿಸಬೇಕು. ಅಂತೆಯೇ ಮಕ್ಕಳು ತಮ್ಮ ಶಿಕ್ಷಕರು , ಪೋಷಕರ ಬುದ್ಧಿಮಾತುಗಳನ್ನು ಸದ್ಭಾವನೆಯಿಂದ ಸ್ವೀಕರಿಸಿ, ಓದಿನತ್ತ ಗಮನಹರಿಸಬೇಕೆಂದು ಕಿವಿಮಾತು ಹೇಳಿದ್ದಾರೆ.