
ಬೆಂಗಳೂರು, ಜ.10- ನಗರದ ನಾಗರಿಕರಿಗೆ ನೀರಿನ ದರ ಏರಿಕೆಯ ಬರೆ ಎಳೆಯಲು ಜಲಮಂಡಳಿ ಮುಂದಾಗಿದೆ.ಮಾರ್ಗಸೂಚಿ ದರ, ತೆರಿಗೆ ಹೆಚ್ಚಳ ಮುಂತಾದ ದರಗಳ ಹೆಚ್ಚಳದಿಂದ ತತ್ತರಿಸಿರುವ ನಗರವಾಸಿಗಳು ಈಗ ನೀರಿನ ದರ ಹೆಚ್ಚಳದ ಹೊಡೆತವನ್ನು ತಡೆದುಕೊಳ್ಳಬೇಕಿದೆ.
ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆದಾರರ ನೀರಿನ ದರ ಪರಿಷ್ಕರಿಸಲು ಜಲಮಂಡಳಿ ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ.ಶೇ.30 ರಿಂದ 35ರಷ್ಟು ನೀರಿನ ದರ ಏರಿಸಲು ಮಂಡಳಿ ಮುಂದಾಗಿದೆ.ವಿದ್ಯುತ್ ಬಿಲ್, ಕೇಬಲ್ ಬಿಲ್ ಎಲ್ಲ ಬಿಲ್ಗಳು ಏರಿಕೆಯಾಗಿವೆ. ಈಗ ಕುಡಿಯುವ ನೀರಿನ ಬಿಲ್ ಕೂಡ ಏರಿಕೆಯಾಗಲಿದೆ. ನಿಖರವಾಗಿ ಎಷ್ಟು, ಯಾವಾಗಿನಿಂದ ಜಾರಿ ಎಂಬುದಷ್ಟೇ ನಿರ್ಧಾರವಾಗಬೇಕಿದೆ.ಡೀಸೆಲ್ ದರ ಹೆಚ್ಚಳದಲ್ಲಿ ಸಾರಿಗೆ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿತ್ತು. ಸಾರ್ವಜನಿಕರ ತೀವ್ರ ವಿರೋಧದಿಂದ ತೆರಿಗೆ ಹೆಚ್ಚಳದ ದರದ ಪ್ರಸ್ತಾಪವನ್ನು ಕೈಬಿಟ್ಟಿತ್ತು.ಈಗ ನೀರಿನ ದರ ಹೆಚ್ಚಳ ಮಾಡಲು ಮುಂದಾಗಿದೆ.ಕುಡಿಯುವ ನೀರು ಸರಬರಾಜಿನಲ್ಲಿ ಶೇ.40ರಷ್ಟು ಸೋರಿಕೆಯಾಗುತ್ತಿದೆ.ಸೋರಿಕೆಯನ್ನು ತಡೆಗಟ್ಟದ ಇಲಾಖೆ ಮತ್ತೆ ದರ ಹೆಚ್ಚಳಕ್ಕೆ ಮುಂದಾಗಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.