ಶೇ.10ರಷ್ಟು ಮೀಸಲಾತಿ ಕೇಂದ್ರ ಸರ್ಕಾರದ ಕ್ರಮ ಗೊಂದಲಕಾರಿ ಚಿಂತನೆ, ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ; ನೊಬೆಲ್ ಪುರಸ್ಕೃತ ಅಮತ್ರ್ಯ ಸೇನ್

ಕೊಲ್ಕತ್ತಾ, ಜ. 10- ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಗೊಂದಲಕಾರಿ ಚಿಂತನೆ, ಇದು ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮತ್ರ್ಯ ಸೇನ್ ಹೇಳಿದ್ದಾರೆ.

ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಸಾಧಿಸಿದ್ದ ಉನ್ನತ ಮಟ್ಟದ ಆರ್ಥಿಕ ಪ್ರಗತಿಯನ್ನು ಮೋದಿ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಆದರೆ ಇದರಿಂದ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ ಸುರಕ್ಷೆ ಹಾಗೂ ಎಲ್ಲರಿಗೂ ಶಿಕ್ಷಣ ನೀಡುವಂಥ ಗುರಿ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಮೀಸಲಾತಿ ಕಲ್ಪಿಸುವುದು ಭಿನ್ನ ಸಮಸ್ಯೆ. ಎಲ್ಲ ಜನರಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿದರೆ, ಅದು ಮೀಸಲಾತಿಯನ್ನು ಕಿತ್ತುಹಾಕುವುದಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಹಜವಾಗಿಯೇ ಇದು ಗೊಂದಲಕಾರಿ ಚಿಂತನೆ. ಇಂಥ ಚಿಂತನೆಯಿಂದ ಗಂಭೀರ ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳು ಎದುರಾಗಬಹುದು, ಇವು ಗಂಭೀರವಾಗಿ ಪ್ರಶ್ನಾರ್ಹ ಎಂದು ಹೇಳಿದರು.

ಪಂಚರಾಜ್ಯಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಗ್ಗೆ ಕೇಳಿದ ಪ್ರಶ್ನೆಗೆ, ಇದನ್ನು ವಿಸ್ತತವಾಗಿ ಅಧ್ಯಯನ ಮಾಡಬೇಕಾಗಿದೆ. ಆದರೆ ಅಂಥ ಅಧ್ಯಯನ ಆಗಿಲ್ಲ ಎಂದು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ