ಭಾರತೀಯ ವಿದ್ಯಮಾನ ಮತ್ತು ಸಂಗತಿಗಳನ್ನು ಪಾಕಿಸ್ತಾನದ ಟಿವಿ ವಾಹಿನಿಗಳು ಪ್ರಸಾರ ಮಾಡಬಾರದು : ಪಾಕಿಸ್ತಾನ ಸುಪ್ರೀಂಕೋರ್ಟ್

ಇಸ್ಲಾಮಾಬಾದ್,ಜ.10- ಭಾರತೀಯ ವಿದ್ಯಮಾನ ಮತ್ತು ಸಂಗತಿಗಳನ್ನು ಪಾಕಿಸ್ತಾನದ ಟಿವಿ ವಾಹಿನಿಗಳು ಪ್ರಸಾರ ಮಾಡಬಾರದೆಂದು ಇಲ್ಲಿನ ಸುಪ್ರೀಂಕೋರ್ಟ್ ಹೇಳಿದೆ.

ಪಾಕಿಸ್ಥಾನದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಕಿಬ್ ನಿಸಾರ್, ಪಾಕಿಸ್ತಾನದ ಟಿವಿ ವಾಹಿನಿಗಳು ಭಾರತದ ಸಂಗತಿಗಳನ್ನು ಪ್ರಸಾರ ಮಾಡುವ ಕಾರಣ ಭಾರತೀಯ ಅಂಶಗಳಿಂದ ಪಾಕ್ ಸಂಸ್ಕೃತಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಂಗತಿಗಳನ್ನು ಪಾಕಿಸ್ತಾನ ವಾಹಿನಿಗಳು ಪ್ರಸಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣ ಪ್ರಾಧಿಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಇಂಥದೊಂದು ಆದೇಶ ನೀಡಿದೆ.

ಈಗಾಗಲೇ ವಿದೇಶಿ ಅಂಶಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಪ್ರಾಧಿಕಾರದ ಕೌನ್ಸೆಲ್ ಝಫರ್ ಇಕ್ಬಾಳ್ ಕಲನೌರಿ ಸಿಜೆಐ ನೇತೃತ್ವದ ತ್ರಿ ಸದಸ್ಯ ಪೀಠಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಫಿಲ್ಮಝಿಯಾ ವಾಹಿನಿಯಲ್ಲಿ ಶೇ.65ರಷ್ಟು ಅಂಶಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸಲೀಂ ಬೈಗ್ ತಿಳಿಸಿದರು.

ಈ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಸಿಜೆಐ, ಪಾಕ್? ವಾಹಿನಿಗಳಲ್ಲಿ ಭಾರತದ ಅಂಶಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಹೇಳಿ, ಈ ಕುರಿತಾದ ಆದೇಶವನ್ನು ಫೆಬ್ರವರಿ ಮೊದಲ ವಾರಕ್ಕೆ ಮೂಡಿದ್ದಾರೆ.

2016ರಲ್ಲಿಯೇ ಪ್ರಾಧಿಕಾರವು ಟಿವಿ ಹಾಗೂ ಎಫ್‍ಎಂಗಳಲ್ಲಿ ಭಾರತೀಯ ಸಂಗತಿಗಳನ್ನು ಪ್ರಸಾರ ಮಾಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ