ನವದೆಹಲಿ, ಜ.10- ಜೈಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ತೀವ್ರ ಸ್ತ್ರೀದ್ವೇಷ, ಆಕ್ರಮಣಕಾರಿ ಮತ್ತು ಅನೈತಿಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯೂ) ಇಂದು ನೋಟಿಸ್ ಜಾರಿಗೊಳಿಸಿದೆ.
ಜ.9ರಂದು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗಳ ಆಧಾರದ ಮೇಲೆ ಆಯೋಗವು ಸ್ವಯಂಪ್ರೇರಿತ ಪ್ರಜ್ಞಾಪೂರ್ವಕ ಕ್ರಮ ಕೈಗೊಂಡಿದ್ದು, ಈ ಸಂಬಂಧ ರಾಹುಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಎನ್‍ಸಿಡಬ್ಲ್ಯೂ ಅಧ್ಯಕ್ಷೆ ರೇಖಾಶರ್ಮ ತಿಳಿಸಿದ್ದಾರೆ.
ಮಹಿಳಾ ಸಚಿವರ ವಿರುದ್ಧ ರಾಹುಲ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅದು ತೀವ್ರ ಸ್ತ್ರೀ ದ್ವೇಷ, ಆಕ್ರಮಣಕಾರಿ ಮತ್ತು ಅನೈತಿಕ ಅಂಶಗಳಿಂದ ಕೂಡಿದೆ ಎಂದು ಆರೋಪಿಸಿರುವ ಆಯೋಗದ ಮುಖ್ಯಸ್ಥರು ನೀವು (ರಾಹುಲ್) ಮಹಿಳೆಯರನ್ನು ದುರ್ಬಲರು ಎಂದು ತಿಳಿದಿದ್ದೀರ ಎಂಬುದಾಗಿ ಪ್ರಶ್ನಿಸಿದ್ದಾರೆ.
56 ಅಂಗುಲ ಎದೆಯ ಕಾವಲುಗಾರ (ಪ್ರಧಾನಿ)ರಫೇಲ್ ಹಗರಣದಲ್ಲಿ ಉತ್ತರಿಸಲಾಗದೆ ಓಡಿಹೋಗಿದ್ದಾರೆ ಮತ್ತು ಓರ್ವ ಮಹಿಳೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ರಾಹುಲ್ ರಾಜಸ್ಥಾನ ರಾಜಧಾನಿ ಜೈಪುರ್‍ನಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಟೀಕಿಸಿದ್ದರು.