ಬೆಂಗಳೂರು,ಜ.10-ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದ ಸುಮಾರು 300ಕ್ಕೂ ಹೆಚ್ಚು ನಿಷ್ಠಾವಂತ ಕಾರ್ಯಕರ್ತರ ಅಮಾನತುಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಶಾಸಕ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ತಮ್ಮನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ನೇಮಿಸದ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಹಲವಾರು ಕಾರ್ಯಕರ್ತರು ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯ ಮಾಹಿತಿ ಇಲ್ಲದೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್ ನಾಯಕರ ಭಾವಚಿತ್ರ ಹಿಡಿದು ಘೋಷಣೆ ಮಾಡಿದ್ದರು.
ಇದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನೊಳಗೊಂಡಂತೆ ವಿವಿಧ ಸ್ಥಾನಗಳಲ್ಲಿರುವ 300ಕ್ಕೂ ಹೆಚ್ಚು ಕಾರ್ಯಕರ್ತರನ್ನು ಅಮಾನತು ಮಾಡಿರುವುದು ನನಗೆ ಸಾಕಷ್ಟು ನೋವು ತಂದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಘಟನೆಗಳು ಅನಿರೀಕ್ಷಿತವಾಗಿದ್ದು ನನ್ನನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಿಸದ ಹಿನ್ನೆಲೆಯಲ್ಲಿ ನೊಂದ ಅವರು ವರಿಷ್ಠರಲ್ಲಿ ಮನವಿ ಮಾಡಲು ಬಂದಾಗ ನಡೆದ ಅಚಾತುರ್ಯವಾಗಿದ್ದು ಇದನ್ನು ಹೊರತುಪಡಿಸಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಅಥವಾ ಲಕ್ಷ್ಮಣೆ ರೇಖೆ ದಾಟುವ ಸಾಲಿನಲ್ಲಿ ಈ ಕಾರ್ಯಕರ್ತರಿಲ್ಲ.
ನನ್ನ ಗೆಲುವಿಗೆ ಇವರ ಶ್ರಮ ಅಪಾರವಾಗಿದೆ.ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ತೀರ್ಮಾನದಿಂದ ಪಕ್ಷಕ್ಕೆ ಹಿನ್ನಡೆಯಾಗುವುದಲ್ಲದೆ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಭಿನ್ನಮತಕ್ಕೂ ಕಾರಣವಾಗಲಿದೆ.ಈ ಹಿನ್ನೆಲೆಯಲ್ಲಿ ಕೂಡಲೇ ಅಮಾನತು ಆದೇಶ ಹಿಂಪಡೆಯುವಂತೆ ಶಾಸಕ ಸುಧಾಕರ್ ಕೋರಿದ್ದಾರೆ.