ನವದೆಹಲಿ, ಜ.10 (ಪಿಟಿಐ)- ಪಾಕಿಸ್ತಾನ ಮತ್ತು ಚೀನಾ ಗಡಿಗಳ ಉದ್ದಕ್ಕೂ ತಲೆದೋರಿದ್ದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತ ಸೇನೆ ಯಶಸ್ವಿಯಾಗಿದೆ ಎಂದು ಹೇಳಿರುವ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಇಂದು ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಗಾಗಿ ಮಾತ್ರ ನಾವು ಸಂಧಾನಕಾರರು. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಇದು ಕಾಶ್ಮೀರ ಸೇರಿದಂತೆ ಎಲ್ಲೆಡೆ ಅನ್ವಯಿಸುತ್ತದೆ ಎಂದು ಜನರಲ್ ರಾವತ್ ತಿಳಿಸಿದರು.
ಆಫ್ಘಾನಿಸ್ತಾನದಲ್ಲಿ ಶಾಂತಿ ನೆಲಸಬೇಕೆಂದು ಭಾರತವು ಮೊದಲಿನಿಂದಲೂ ಬಯಸುತ್ತಿದೆ. ಇದಕ್ಕಾಗಿ ನಮ್ಮ ದೇಶವು ಆಫ್ಘನ್‍ಗೆ ಸೇನಾ ಸಹಾಯ ಹಸ್ತ ಕೂಡ ಚಾಚಿದೆ ಎಂದು ಅವರು ಹೇಳಿದರು.