ಬೆಂಗಳೂರು,ಜ.10-ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರುಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚಿತವಾದ ವಿಚಾರಗಳೇ ಬೇರೆ.ಆದರೆ ಮಾಧ್ಯಮಗಳಲ್ಲಿ ವರದಿಯಾಗಿದ್ದೇ ಬೇರೆ.ಸಮ್ಮಿಶ್ರ ಸರ್ಕಾರದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದೆಲ್ಲ ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು.
ಯಾವುದೇ ಅಡೆತಡೆ ಇಲ್ಲದೆ ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲಿದ್ದು, ಸರ್ಕಾರದ ಬಗ್ಗೆ ಅಪನಂಬಿಕೆ ಬೇಡ ಎಂದರು.
ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್ನಲ್ಲಿದ್ದಾಗ ಬಿಜೆಪಿಯವರ ವಿರುದ್ಧ ಮಾತನಾಡುತ್ತಿದ್ದರು.ಈಗ ಮತ್ತೆ ಬಿಜೆಪಿಯಲ್ಲಿರುವರು. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.ಇದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಇದು ನಮ್ಮ ಅಭಿಪ್ರಾಯ ಎಂದ ಅವರು,ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕುರಿತಂತೆ ಪ್ರತಿಕ್ರಿಯೆ ನೀಡಿ, ಜನರ ಸಮಸ್ಯೆಯನ್ನು ನಿವಾರಣೆ ಮಾಡುವುದು ಮುಖ್ಯ. ಅದಕ್ಕಾಗಿ ಆದ್ಯತೆ ನೀಡಿದ್ದೇವೆ. ಇದರಲ್ಲಿ ಯಾವುದೇ ಒತ್ತಡವಿಲ್ಲ ಎಂದು ಹೇಳಿದರು.
ನೀರಿಗೆ ಕೀಟನಾಶಕ ಬೆರಕೆ ಪ್ರಕರಣ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರ,ಎಸ್ಪಿ ಹಾಗೂ ಸಿಇಒ ಅವರೊಂದಿಗೆ ಚರ್ಚೆ ನಡೆಸಿದ್ದು, ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕ ವರದಿ ನೀಡಲು ಸೂಚಿಸಲಾಗಿದೆ ಎಂದು ಉತ್ತರಿಸಿದರು.