ಎಐಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ತೃತೀಯಲಿಂಗಿ ಅಪ್ಸರಾ ರೆಡ್ಡಿ ನೇಮಕ

ನವದೆಹಲಿ: ತೃತೀಯಲಿಂಗಿ ಮತ್ತು ಪತ್ರಕರ್ತೆ ಅಪ್ಸರಾ ರೆಡ್ಡಿ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್​ನ (ಎಐಎಂಸಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಎಂಸಿ ಅಧ್ಯಕ್ಷೆ ಸುಷ್ಮಿತಾ ದೇವ್ ಅವರ ಸಮ್ಮುಖದಲ್ಲಿ ಅಪ್ಸರಾ ರೆಡ್ಡಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಯಿತು..

ಎಐಎಡಿಎಂಕೆ ಪಕ್ಷದಲ್ಲಿ ಇದ್ದ ಅಪ್ಸರಾ, 2016ರ ಡಿಸೆಂಬರ್​ನಲ್ಲಿ ಜಯಲಲಿತಾ ನಿಧನರಾದ ಬಳಿಕ ಶಶಿಕಲಾರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಎಐಎಡಿಎಂಕೆ ಸೇರುವುದಕ್ಕೂ ಮೊದಲು ಬಿಜೆಪಿಯಲ್ಲಿ ಕೆಲವು ಕಾಲ ಇದ್ದರು. ಬಾನುಲಿಯಲ್ಲಿ ಪತ್ರಕರ್ತೆಯಾಗಿದ್ದ ಅವರು ತನಿಖಾ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದರು.

ಎಐಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅಪ್ಸರಾ ರೆಡ್ಡಿ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ದೇಶದಲ್ಲಿರುವ ಬಹುದೊಡ್ಡ ಸಂಖ್ಯೆಯಲ್ಲಿರುವ ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆ. ನಾನು ಲಿಂಗ ನ್ಯಾಯದ ಮೇಲೆ ನಂಬಿಕೆಯಿಟ್ಟಿದ್ದೇನೆ. ಕಳೆದ ಐದು ವರ್ಷಗಳಿಂದ ದೇಶದಲ್ಲಿ ಮಹಿಳೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ನನ್ನಲ್ಲಿ ಮೂಡಿದೆ. ಬಿಜೆಪಿ ನೇತೃತ್ವದ ಸರ್ಕಾರ ಮಹಿಳಾ ವಿರೋಧಿ ಸರ್ಕಾರವನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಜಕೀಯವನ್ನು ಬದಿಗೊತ್ತಿ ತೃತೀಯ ಲಿಂಗಿಗಳ ಸಮುದಾಯವನ್ನು ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ತೃತೀಯ ಲಿಂಗಿ ಹೋರಾಟಗಾರ ಕಲ್ಕಿ ಸುಬ್ರಮಣಿಯಮ್ ಅವರು ಮಾತನಾಡಿ, ತೃತೀಯ ಲಿಂಗಿಗಳು ರಾಜಕೀಯ ಪ್ರವೇಶ ಮಾಡುತ್ತಿರುವುದು ಸ್ವಾಗತಾರ್ಹ. ಈ ರೀತಿಯ ಬೆಳವಣಿಗೆಗಳು ಭವಿಷ್ಯದಲ್ಲಿ ನಮ್ಮ ಸಮುದಾಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಒಂದು ಸಮುದಾಯ ಅಭಿವೃದ್ಧಿಗೊಳ್ಳಲು ರಾಜಕೀಯ ಪ್ರೇರಣೆ ಅತ್ಯಂತ ಮುಖ್ಯವಾದದ್ದು ಎಂದು ಹೇಳಿದ್ದಾರೆ.

Apsara Reddy Becomes First Transgender Officebearer in Congress’s History

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ