ಹುಬ್ಬಳ್ಳಿ: ರಾಜ್ಯ ಸರ್ಕಾರ ಜನಪರ ಕಾರ್ಯ ಮಾಡುವಲ್ಲಿ ವಿಫಲವಾಗಿದ್ದು, ಕೇವಲ ಸಾಲಮನ್ನಾ ಹೆಸರಿನಲ್ಲಿ ಜನತೆಗೆ ವಂಚನೆ ಮಾಡುತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ಸಾಲಮನ್ನಾ ಮಾಡದೆ ವಂಚನೆ ಮಾಡುತ್ತಿದೆ. ಈವರೆಗೂ ರೈ ತರಿಗೆ ಸರಿಯಾದ ಸಾಲಮನ್ನಾ ಆಗಿಲ್ಲ. ಇದರ ಮಧ್ಯೆ ಬಡವರ ಬಂಧು ಯೋಜನೆ ಎಂಬ ಒಂದು ಶುದ್ಧ ಸುಳ್ಳು ಯೋಜನೆ ಹರಿಬಿಟ್ಟಿದ್ದಾರೆ. ಬಡವರ ಬಂಧು ಯೋಜನೆಯಲ್ಲಿ ಸಹಕಾರಿ ಸಂಘಗಳಿಂದ ಹಣ ಕೊಡಿಸುತ್ತಿದ್ದಾರೆ. ಸಹಕಾರಿ ಬ್ಯಾಂಕ್ಗಳಲ್ಲಿ ಸದಸ್ಯತ್ವ ಇಲ್ಲದವರಿಗೆ ಹಣ ನೀಡಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಸಿಎಂಗೆ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಈಗ ಕೇವಲ 20 ಜನರಿಗೆ ಮಾತ್ರ ಹಣ ನೀಡಿದ್ದಾರೆ. ಈ ಯೋಜನೆ ಯಾರಿಗೂ ಉಪಯೋಗ ಆಗಿಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಸಿಎಂ ಆದ್ರೆ ಅವರು ನನಗೆ ಬೆಂಬಲ ನೀಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ನಾನು ರಮೇಶ್ ಜಾರಕಿಹೊಳಿ ಜೊತೆಗೆ ಚರ್ಚೆ ಮಾಡಿಲ್ಲ. ಅವರನ್ನು ಭೇಟಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಚ್ಚಾಟ ಹೆಚ್ಚಾಗಿದ್ದು, ಅವರೇ ಸರ್ಕಾರವನ್ನು ಕೆಡವಿಕೊಳ್ಳುತ್ತಾರೆ ಎಂದರು.
ವಿಧಾನಸೌಧದ ಬಳಿ ಹಣ ಸಿಕ್ಕ ಪ್ರಕರಣದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ ಕುಮಾರಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.