ನವದೆಹಲಿ, ಜ. 9- ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶನ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಸಲ್ಲಿಸಿರುವ ಮೇಲ್ಮನವಿ ಕುರಿತು ದಹೆಲಿ ಹೈಕೋರ್ಟ್ ಜ.15ರಂದು ವಿಚಾರಣೆ ನಡೆಸಲಿದೆ.
ಪ್ರಕರಣ ಕುರಿತು ವಿಚಾರಣೆಗಾಗಿ ಸಾಲಿಸಿಟರ್ ಜನರಲು ತುಷಾರ್ ಮೆಹ್ತಾ ಮತ್ತು ಎಜೆಎಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ನ್ಯಾಯಾಲಯದಲ್ಲಿ ಇಂದು ಹಾಜರಿರಲಿಲ್ಲ. ವಕೀಲರ ಅನುಪಸ್ಥಿತಿಯಿಂದಾಗಿ ಪ್ರಕರಣ ವಿಚಾರಣೆಯನ್ನು ಕೋರ್ಟ್ ಜ.15ಕ್ಕೆ ಮುಂದೂದಿದೆ.
ಈ ಪ್ರಕರಣದಲ್ಲಿ ತಮ್ಮ ಪರ ನೇತೃತ್ವ ವಹಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ರಾಜೇಶ್ ಗೊಂಗಾ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ನ್ಯಾಯಮೂರ್ತಿ ವಿ.ಕೆ.ರಾವ್ ಅವರ ಪೀಠಕ್ಕೆ ತಿಳಿಸಿದರು.
ಇದೇ ವೇಳೆ, ಎಜೆಎಲ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಸಹ ನ್ಯಾಯಾಲಯದಲ್ಲಿ ಇಂದು ಹಾಜರಿರಲಿಲ್ಲ. ಈ ಕಾರಣದಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಜ.15ಕ್ಕೆ ಮುಂದೂಡಲಾಯಿತು.
ನವದೆಹಲಿಯ ಐಟಿಓನಲ್ಲಿರುವ ಕಚೇರಿಯನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಎಜೆಎಲ್ಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಎಜೆಎಲ್ ಮೇಲ್ಮವಿ ಸಲ್ಲಿಸಿತ್ತು. ಕಳೆದ ವರ್ಷ ಡಿಸೆಂಬರ್ 21ರಂದು ಏಕ ನ್ಯಾಯಾಧೀಶರ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು. ಏಕ ನ್ಯಾಯಾಧೀಶರ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಎಜೆಎಲ್ ಮತ್ತೆ ಮೇಲ್ಮನವಿ ಸಲ್ಲಿಸಿತ್ತು.