ಬೆಂಗಳೂರು, ಜ. 9-ಇಂಜಿನಿಯರಿಂಗ್ ಮತ್ತು ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪರೀಕ್ಷೆಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಲ್ಲಾ ಪರೀಕ್ಷೆಗಳು ಇನ್ನು ಮುಂದೆ ಆನ್ಲೈನ್ನಲ್ಲಿರಬೇಕು, ನೇಮಕಾತಿ ಕೂಡ ಆನ್ಲೈನ್ ಆಗಿರಬೇಕು ಎಂದು ಸೂಚಿಸಲಾಗಿದೆ. ಮುಂದಿನ ವರ್ಷದಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ಜ.19 ರಂದು ಸಭೆ ಕರೆಯಲಾಗಿದ್ದು, ಅಲ್ಲಿ ಅಂತಿಮ ಹಂತದ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಉನ್ನತ ಶಿಕ್ಷಣ ಪಠ್ಯ ಕ್ರಮ ಬದಲಾವಣೆ:
ಬಿ.ಎ., ಬಿ.ಕಾಂ ನಂತರ ಸಂಪ್ರದಾಯ ಶಿಕ್ಷಣದ ಪಠ್ಯ ಕ್ರಮಗಳು ಹಲವು ವರ್ಷಗಳಿಂದಲೂ ಒಂದೇ ರೀತಿ ಉಳಿದಿವೆ. ಕಾಲಮಾನಕ್ಕೆ ತಕ್ಕಂತೆ ಅದನ್ನು ಬದಲಾವಣೆ ಮಾಡುವ ಕೆಲಸ ಆಗಿಲ್ಲ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಕೈಗಾರಿಕೆ, ಉದ್ದಿಮೆಗಳಲ್ಲಿ ಸಾಕಷ್ಟು ಮಾನವ ಸಂಪನ್ಮೂಲದ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮ ಬದಲಾವಣೆಯಾಗಬೇಕು. ಸೂಕ್ತವಾಗಿರುವ ವಿಷಯಗಳನ್ನು ಉಳಿಸಿಕೊಂಡು ಮತ್ತಷ್ಟು ಹೊಸ ವಿಷಯಗಳನ್ನು ಸೇರ್ಪಡೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿವಿ ಕುಲಪತಿಗಳ ಜೊತೆ ಚರ್ಚೆ ಮಾಡಲು ನಾಳೆ ಸಭೆ ಕರೆಯಲಾಗಿದೆ. ಕಾಲಕ್ಕೆ ತಕ್ಕಂತೆ ಪಠ್ಯಕ್ರಮ ಬದಲಾವಣೆ ಮಾಡುವ ಬಗ್ಗೆ ಕುಲಪತಿಗಳ ಜೊತೆ ಚರ್ಚಿಸಲಾಗುವುದು. ಅದೇ ರೀತಿ ಮುಂದಿನ ಬಜೆಟ್ನಲ್ಲಿ ತೆಗೆದುಕೊಳ್ಳಬೇಕಾದ ಹೊಸ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಈ ಹಿಂದೆ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಲಾಗಿತ್ತು. ಅವುಗಳ ಅನುಷ್ಟಾನದ ಬಗ್ಗೆಯೂ ಮಾಹಿತಿ ಕೊಡಲಾಗುವುದು ಎಂದರು.
ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರನ್ನು ಸ್ಥಳಾಂತರಿಸದೆ ಅವರಿಗೆ ಎಲ್ಲಾ ಕಾಲೇಜುಗಳ ವ್ಯವಹಾರಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಬದಲು ಇರುವಷ್ಟು ಸರ್ಕಾರಿ ಇಂಜಿನಿರಯಿಂಗ್ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ ಎಂದರು.
ಖಾಸಗಿ ಕಾಲೇಜುಗಳ ಮಾದರಿಯಲ್ಲೇ ಸ್ಪರ್ಧಾತ್ಮಕವಾದ ಗುಣಮಟ್ಟ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಲಾಗುತ್ತಿದೆ. ರಾಜ್ಯದಲ್ಲಿರುವ 229 ಪದವಿ ಕಾಲೇಜುಗಳಿಗೆ ಬಜೆಟ್ನಲ್ಲಿ 250 ಕೋಟಿ ರೂ. ಅನುದಾನ ನೀಡಲಾಗಿತ್ತು. ನಬಾರ್ಡ್ 750 ಕೋಟಿ ರೂ. ಅನುದಾನ ನೀಡಿದೆ. ಇನ್ನಷ್ಟು ಸಂಪನ್ಮೂಲ ಕ್ರೋಢೀಕರಿಸಿ 1,200 ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಿದರು.
ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಖಾಲಿ ಇರುವ ಕುಲಪತಿ ಹುದ್ದೆಗಳಿಗೆ ತಿಂಗಳಾಂತ್ಯದಲ್ಲಿ ನೇಮಕಾತಿ ಪೂರ್ಣಗೊಳಿಸುವುದಾಗಿ ಹೇಳಿದರು.
ಕುಲಪತಿಗಳ ನೇಮಕಾತಿಯ ಶೋಧನಾ ಸಮಿತಿ ರಚನೆ ವಿಷಯವಾಗಿ ರಾಜ್ಯ ಸರ್ಕಾರ ರೂಪಿಸಿರುವ ಕಾನೂನಿಗೆ ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ಸಹಿ ಹಾಕುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇಂಗ್ಲೀಷ್ ಮಾಧ್ಯಮ ವಿರೋಧ ಅನಗತ್ಯ:
ರಾಜ್ಯದಲ್ಲಿ ಸಾವಿರಾರು ಕಾನ್ವೆಂಟ್ಗಳಿವೆ. ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಪೆÇೀಷಕರು ವ್ಯಾನ್ಗಳಲ್ಲಿ ಸ್ಕೂಲ್ಗೆ ಕಳುಹಿಸುತ್ತಾರೆ. ಸರ್ಕಾರ ಒಂದು ಸಾವಿರ ಶಾಲೆಯಲ್ಲಿ ಪ್ರಾಯೋಗಿಕವಾಗಿ ಇಂಗ್ಲೀಷ್ ಮಾಧ್ಯಮವನ್ನು ಆರಂಭಿಸಲು ಮುಂದಾದರೆ ಅದಕ್ಕೆ ಅಡ್ಡಿಪಡಿಸುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. ಇಂಗ್ಲೀಷ್ ಮಾಧ್ಯಮದಿಂದ ಕನ್ನಡವನ್ನು ನಿರ್ಲಕ್ಷಿಸಲಾಗುತ್ತದೆ ಎಂಬುದು ಸರಿಯಲ್ಲ. ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಸುವ ಅಗತ್ಯವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಗ್ಲೀಷ್ ಬೇಡ ಎಂದು ಹೇಳಿಲ್ಲ. ಅವರಿಗೆ ಕನ್ನಡಾಭಿಮಾನ ಜಾಸ್ತಿ. ಕನ್ನಡಕ್ಕೆ ಒತ್ತು ಕೊಡಿ ಎಂದು ಹೇಳಿದ್ದಾರೆ. ಅದನ್ನು ಅಪಾರ್ಥ ಮಾಡಲಾಗುತ್ತಿದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕಾತಿಯಲ್ಲಿ ಹಂತ ಹಂತವಾಗಿ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ನೇಮಿಸಿದಂತೆ ಜೆಡಿಎಸ್ನಲ್ಲೂ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಬೇಕೆಂಬ ಚರ್ಚೆ ನಿನ್ನೆಯ ಶಾಸಕಾಂಗ ಸಭೆಯಲ್ಲಿ ನಡೆದಿದೆ. ಎರಡೂ ಪಕ್ಷಗಳ ಹೈಕಮಾಂಡ್ನವರು ಯಾವ ರೀತಿ ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ. ಅದನ್ನು ಆಧರಿಸಿ ನೇಮಕಾತಿ ನಡೆಯುತ್ತದೆ ಎಂದು ಹೇಳಿದರು.