ಭಾರತ್ ಬಂದ್: ಕೆಲ ರಾಜ್ಯಗಳಲ್ಲಿ ಕಲ್ಲು ತೂರಾಟ; ಹಲವೆಡೆ ಬಹುತೇಕ ಶಾಂತಿಯುತ

ನವದೆಹಲಿ, ಜ.9-ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ನಿನ್ನೆಯಿಂದ ನಡೆಸುತ್ತಿರುವ ಭಾರತ್ ಬಂದ್ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಕೆಲವು ರಾಜ್ಯಗಳಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಇಂದಿನ ಬಂದ್ ಶಾಂತಿಯುತವಾಗಿತ್ತು. ಎರಡನೇ ದಿನದ ಭಾರತ್ ಬಂದ್ ವೇಳೆ ದೇಶಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

10 ಕಾರ್ಮಿಕ ಸಂಘಟನೆಗಳ(ಸಿಟಿಯುಗಳು) ಬಾರತ್ ಬಂದ್ ಪ್ರತಿಭಟನಾ ಕರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 20 ಕೋಟಿ ಕಾರ್ಮಿಕರು ಇಂದು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಉತ್ತರ ಭಾರತ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ. ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿವೆ. ಕೆಲವೆಡೆ ಬಂದ್ ನೀರಸವಾಗಿತ್ತು.

ಬಂದ್ ಪ್ರಯುಕ್ತ ಕಾರ್ಮಿಕ ಸಂಘಟನೆಗಳು ಕೆಂಪು ಬಾವುಟಗಳೊಂದಿಗೆ ರ್ಯಾಲಿ, ರಸ್ತೆ ತಡೆ ಮತ್ತು ರಸ್ತೆಗಳ ವೃತ್ತಗಳಲ್ಲಿ ಧರಣಿ ನಡೆಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಕೆಲವೆಡೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳನ್ನು ದಹನ ಮಾಡಿದರು.
ಎರಡನೇ ದಿನದ ಬಂದ್ ವೇಳೆ ಬ್ಯಾಂಕ್ ಹಾಗೂ ಸಾರಿಗೆ ಸೇವೆಗಳಲ್ಲಿ ವ್ಯತ್ಯಯವಾಗಿದ್ದರೂ, ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳು ಲಭ್ಯವಿದೆ. ಕೆಲವು ರಾಜ್ಯಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದರೆ, ಹಲವೆಡೆ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಿದ್ದರು.

ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ಪಂಜಾಬ್, ಹರಿಯಾಣ, ಜಾರ್ಖಂಡ್, ಗೋವಾ, ಓಡಿಶಾ ಮಣಿಪುರ, ಅಸ್ಸಾಂ, ಮೇಘಾಲಯಗಳಲ್ಲಿ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ

ನಿನ್ನೆ ಕೆಲವೆಡೆ ಬಂದ್ ವಿಫಲವಾದ ಹಿನ್ನೆಲೆಯಲ್ಲಿ ದೂರಸಂಪರ್ಕ, ಆರೋಗ್ಯ, ಶಿಕ್ಷಣ, ಕಲ್ಲಿದ್ದಲು, ಉಕ್ಕು, ವಿದ್ಯುತ್, ಬ್ಯಾಂಕಿಂಗ್, ವಿಮಾ, ಸಾರಿಗೆ ಮತ್ತಿತರ ಕ್ಷೇತ್ರಗಳು ಎರಡು ದಿನಗಳ ಬಗ್ಗೆ ಸಂಪೂರ್ಣ ಬೆಂಬಲ ನೀಡಿವೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಬಾಹುಳ್ಯವಿರುವ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.

ಭಾರತ್ ಬಂದ್ ವೇಳೆ ಕೆಲವು ರಾಜ್ಯಗಳಲ್ಲಿ ಬ್ಯಾಂಕï, ಸಾರಿಗೆ ಸೇರಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಿದ್ದರಿಂದ ಜನಜೀವನಕ್ಕೆ ಅಡ್ಡಿಯಾಯಿತು. ಖಾಸಗಿ ಕ್ಯಾಬ್‍ಗಳು ಮತ್ತು ಆಟೋರಿಕ್ಷಾಗಳು ಸಂಚಾರ ವಿರಳವಾಗಿತ್ತು. ಬಂದ್ ಪ್ರಯುಕ್ತ ಹಲವಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದರೆ, ಕೆಲವೆಡೆ ಶಿಕ್ಷಣ ಸಂಸ್ಥೆಗಳಿಗೆ ರಜಿ ನೀಡಿರಲಿಲ್ಲ. ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರೂ ಹಾಜರಾತಿ ಕಡಿಮೆ ಇತ್ತು. ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಮತ್ತಿತರ ಕಚೇರಿಗಳು ಭಾಗಶಃ ಕಾರ್ಯ ನಿರ್ವಹಿಸಿದವು.

ಕಾರ್ಮಿಕ ಸಂಘಟನೆಗಳ ಬಂದ್ ಕರೆ ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಮೇಲೆ ನಿನ್ನೆಯಿಂದ ಗಂಭೀರ ಪರಿಣಾಮ ಬೀರಿದ್ದು. ಅಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. . ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಮತ್ತಿತರ ಕಚೇರಿಗಳು ಭಾಗಶಃ ಕಾರ್ಯ ನಿರ್ವಹಿಸಿದವು.

ಹಲವೆಡೆ ಬಸ್‍ಗಳಿಗೆ ಕಲ್ಲು ತೂರಾಟ: ನಿನ್ನೆ ಬಂದ್ ವಿಫಲವಾದ ಕಡೆಗಳಲ್ಲಿ ದುಷ್ಕರ್ಮಿಗಳು ಬಸ್‍ಗಳ ಮತ್ತಿತರ ವಾಹನಗಳ ಮೇಲೆ ಕಲ್ಲುಗಳನ್ನು ತೂರಿ ಉದ್ರಿಕ್ತ ಸ್ಥಿತಿ ಸೃಷ್ಟಿಸಲು ಯತ್ನಿಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು. ಕಲ್ಲು ತೂರಾಟದಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಕೆಲವಡೆ ದುಷ್ಕರ್ಮಿಗಳು ಶಾಲಾ ಬಸ್‍ಗಳ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ನಿನ್ನೆ 24 ಪರಗಣ ಜಿಲ್ಲೆಯ ಬರಾಸತ್ ಮತ್ತು ಪಶ್ಚಿಮ್ ಬರ್ದಮಾನ್ ಜಿಲ್ಲೆಗಳಲ್ಲಿ ದುಷ್ಕರ್ಮಿಗಳು ಕೆಲವು ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದ್ದವು. ಇತರ ರಾಜ್ಯಗಳಲ್ಲೂ ಕೆಲವು ಅಹಿತರಕರ ಘಟನೆಗಳು ನಡೆದ ವರದಿಯಾಗಿದೆ. ಪ್ರತಿಭಟನಾಕಾರರ ಗುಂಪು ಬಲವಂತವಾಗಿ ಅಂಗಡಿ ಮತ್ತು ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ದೃಶ್ಯಗಳು ಬೆಳಗ್ಗೆ ಕಂಡುಬಂದವು.

ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ನಿನ್ನೆಯಿಂದ ಎರಡು ದಿನ ಭಾರತ್ ಬಂದ್ ನಡೆಸಿದವು.

ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾನೂನು ತಿದ್ದುಪಡಿ ವಿರೋಧಿಸುವುದರ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿವೆ. 2018ರ ಸೆಪ್ಟೆಂಬರïನಲ್ಲಿ ನಡೆದಿದ್ದ ಕಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ತಮ್ಮ 12 ಬೇಡಿಕೆಗಳನ್ನೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ