ಉತ್ತರ ಕನ್ನಡದ 15 ಮೀನುಗಾರರ ಬಿಡುಗಡೆ

ಟೆಹರಾನ್/ಬೆಂಗಳೂರು, ಜ.9-ಐದು ತಿಂಗಳ ಹಿಂದೆ ಅಕ್ರಮವಾಗಿ ತನ್ನ ಜಲಗಡಿ ಪ್ರವೇಶಿಸಿದ್ದ ಆರೋಪದ ಮೇಲೆ ಇರಾನ್ ಅಧಿಕಾರಿಗಳು ಬಂಧಿಸಿದ್ದ ಉತ್ತರ ಕನ್ನಡದ 15 ಮೀನುಗಾರರನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ.

ಉತ್ತರ ಕನ್ನಡದ 15 ಬೆಸ್ತರನ್ನು ಇರಾನ್ ಮಂಗಳವಾರ ಬಿಡುಗಡೆ ಮಾಡಿರುವುದರಿಂದ ನಮಗೆ ಸಂತೋಷವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿಲ್ಲಾಡಳಿತ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಕಷ್ಟು ಶ್ರಮದ ಫಲವಾಗಿ ಮೀನುಗಾರರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಇರಾನ್‍ನಿಂದ ಬಿಡುಗಡೆಗೊಂಡ ಎಲ್ಲ ಮೀನುಗಾರರು ತಮ್ಮ ದೋಣಿಗಳಲ್ಲಿ ಸಂಯುಕ್ತ ಅರಬ್ ಗಣರಾಜ್ಯ(ಯುಎಇ) ಮಾರ್ಗವಾಗಿ ಭಾರತ ತಲುಪುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇರಾನ್ ಜಲಗಡಿಗೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ ಇವರೆಲ್ಲರನ್ನು ಟೆಹರಾನ್ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ಬಿಡುಗಡೆಗೊಳಿಸಲು ದೋಣಿ ಮಾಲೀಕರು ಸಾಕಷ್ಟು ಶ್ರಮಿಸಿದ್ದರು. ಆದರೆ ಭಾರತೀಯ ವಿದೇಶಾಂಗ ಸಚಿವಾಲಯದ ಮಧ್ಯಸ್ಥಿಕೆ ನಂತರ ಇರಾನ್ ಸರ್ಕಾರ ಇದಕ್ಕೆ ಒಪ್ಪಿ ಅವರನ್ನು ಬಿಡುಗಡೆಗೊಳಿಸಿದೆ.

ಇರಾನ್ ಕರಾವಳಿ ಪ್ರದೇಶದ ಕಿಶ್ ದ್ವೀಪದ ಬಳಗಿ ಜುಲೈ 27ರಂದು ಮೀನುಗಾರರನ್ನು ಇರಾನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.

ಯುಎಇ ವಾಣಿಜೋದ್ಯಮಿಯೊಬ್ಬರಿಗೆ ಸೇರಿದ ಮೂರು ದೋಣಿಗಳಲ್ಲಿ ಇವರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಉತ್ತರ ಕನ್ನಡದ 15 ಬೆಸ್ತರು ಮತ್ತು ದುಬೈನ ಮೂವರು ಮೀನುಗಾರರನ್ನು ಬಂಧಿಸಿದ ನಂತರ ಅವರ ಸ್ಥಿತಿಗತಿ ಬಗ್ಗೆ ವಾಟ್ಸಾಪ್ ಮೂಲಕ ಕಾರವಾರ ಜಿಲ್ಲಾಡಳಿತಕ್ಕೆ ಅವರು ವಿಡಿಯೋ ರವಾನಿಸಿದ್ದರು. ನಂತರ ಜಿಲ್ಲಾಡಳಿತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ಐದು ತಿಂಗಳ ಬಳಿಕ ಎಲ್ಲ ಬೆಸ್ತರು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಕುಲ್ ಸಂತಸದಿಂದ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ