ವಾಷಿಂಗ್ಟನ್, ಜ.8-ಅಚ್ಚರಿ ಬೆಳವಣಿಗೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎರಡನೇ ಅವಧಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 58 ವರ್ಷದ ಕಿಮ್ ಅವರ ಅವಧಿ 2022ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಅವಧಿಗೂ ಮುನ್ನವೇ ಫೆ. 1ರಿಂದ ಜಾರಿಗೆ ಬರುವಂತೆ ಇಂದು ರಾಜೀನಾಮೆ ನೀಡಿದ್ದಾರೆ.
ವಿಶ್ವ ಬ್ಯಾಂಕ್ ನಂತಹ ಗಮನಾರ್ಹ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಹತ್ವದ ಗೌರವವಾಗಿದೆ. ನನ್ನ ಅವಧಿಯಲ್ಲಿ ಬಡತನವನ್ನು ಅಂತ್ಯಗೊಳಿಸಲು ಯತ್ನಿಸಿದ್ದೇನೆ ಎಂದು ಕಿಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಬ್ಯಾಂಕ್ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕಿಮ್ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಸೇರ್ಪಡೆಯಾಗಿದ್ದಾರೆ.
ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಅವರು ಫೆ.1ರಂದು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.