ಮೋದಿ ಸರ್ಕಾರಕ್ಕೆ ಮುಖಭಂಗ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮರು ನೇಮಕಕ್ಕೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಅವರನ್ನು  ಹುದ್ದೆಯಿಂದ ಯಾವುದೇ ಕಾರಣಕ್ಕೆ ತೆಗೆಯಬಾರದು.  ಸಿಬಿಐ ನಿರ್ದೇಶಕರಾಗಿ ವರ್ಮಾ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಸುಪ್ರೀ ಕೋರ್ಟ್​ ತೀರ್ಪು ನೀಡಿದ್ದು, ಈ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರೀಹಿನ್ನಡೆಯಾಗಿದೆ. ಈ ಮೂಲಕ ಮಧ್ಯರಾತ್ರಿ ಅವರನ್ನು ವಜಾಗೊಳಿ ಕೇಂದ್ರ ಸರ್ಕಾರ ಮಾಡಿದ ನಿರ್ಧಾರ ತಪ್ಪು ಎಂದು ಪರೋಕ್ಷವಾಗಿ ತಿಳಿಸಿದೆ.

ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಅಲೋಕ್​ ವರ್ಮಾ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೀಠ, ​ ವರ್ಮಾ ಅವರನ್ನು ಮತ್ತೆ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದ್ದು,ಕೇಂದ್ರ ಸರ್ಕಾರದ ರಜೆ ಆದೇಶವನ್ನು ರದ್ದುಗೊಳಿಸಿದೆ. ಅಲೋಕ್​ ವರ್ಮಾ ಹುದ್ದೆಯಲ್ಲಿ ಮುಂದುವರೆಯಲಿದ್ದು, ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಹಾಗೂ ಹೊಸ ತನಿಖೆ ಆರಂಭಿಸದಂತೆಯೂ ಸೂಚನೆ ನೀಡಿದೆ.

ಉದ್ದೇಶ ಪೂರ್ವಕವಾಗಿ ಸಿಬಿಐ ನಿರ್ದೇಶಕರನ್ನು ಶಾಸಕಾಂಗ ಅವಮಾನಗೊಳಿಸಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ.  ಸಿಬಿಐ ಅಧಿಕಾರಿಗಳ ನೇಮಕಾತಿ, ವಜಾ ಹಾಗೂ ವರ್ಗಾವಣೆಯ ಬಗ್ಗೆ ಸ್ಪಷ್ಟ ನಿಯಮಗಳು ತಿಳಿಸಲಾಗಿದೆ. ಈ ನಿಯಮಗಳ ಅನುಸಾರವಾಗಿ ಅವರನ್ನು ಯಾವುದೇ ಕಾರಣಕ್ಕೂ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ಕೇಂದ್ರಕ್ಕೆ ಇರುವುದಿಲ್ಲ. ವರ್ಮಾ ಅವರು ತಮ್ಮ ಅಧಿಕಾರ ಅವಧಿ ಇರುವವರೆಗೂ ನಿರ್ದೇಶಕರ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ ಎಂದು ಸುಪ್ರೀಂ ತಿಳಿಸಿದೆ.

ರಂಜನ್​ ಗೋಗಯ್​ ಅವರ ಗೈರಿನಲ್ಲಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕೆ ಕೌಲ್ ಮತ್ತು ನ್ಯಾ. ಕೆಎಂ‌ ಜೋಸೆಫ್​ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತು.

ಏನಿದು ವಿವಾದ?: ಮೊದಲಿಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಉಪನಿರ್ದೇಶಕ ರಾಕೇಶ್ ಅಸ್ತಾನ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಸಿಬಿಐ ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರ ರಾತ್ರೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐಗೆ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್​ ರಾವ್ ಅವರನ್ನು ನೇಮಿಸಿತು. ಈ ಕ್ರಮವನ್ನು ಪ್ರಶ್ನಿಸಿ ಅಲೋಕ್​ ವರ್ಮಾ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಅಲೋಕ್​ ವರ್ಮಾ ಪರ ವಾದ ಮಾಡಿದ ಹಿರಿಯ ವಕೀಲರಾದ ಫಾಲಿ ನಾರಿಮನ್​, ಉನ್ನತ ಅಧಿಕಾರವನ್ನು ಹೊಂದಿರುವ ಸಮಿತಿ ಮಾತ್ರ ಸಿಬಿಐ ನಿರ್ದೇಶಕರನ್ನು ವಜಾಗೊಳಿಸಬಹುದು. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು, ಪ್ರಧಾನ ಮಂತ್ರಿ ಹಾಗೂ  ವಿಪಕ್ಷ ನಾಯಕರು ಇರಬೇಕು. ಆದರೆ ಕೇಂದ್ರ ಸರ್ಕಾರ ಸಮಿತಿಯ ಸಲಹೆ ಕೇಳದೆ ಏಕಾಂಗಿಯಾಗಿ  ನಿರ್ಣಯ ಕೈಗೊಂಡಿದೆ ಎಂದು ವಾದಿಸಿದ್ದರು.

ಇನ್ನು ಈ ತೀರ್ಪನ್ನು ಕಾಂಗ್ರೆಸ್​ ನಾಯಕರು ಸ್ವಾಗತಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ​​ “ಸರ್ಕಾರ ಹೇಳಿದ ಕೆಲಸವನ್ನು ಮಾಡಲಿಲ್ಲ ಎಂದು ಸಿಬಿಐ ನಿರ್ದೇಶಕರನ್ನು ವಜಾಗೊಳಿಸಲಾಗಿತ್ತು” ಎಂದರು.

“ಸುಪ್ರೀಂ ಕೋರ್ಟ್​ ತೀರ್ಪಿಗಿಂತ ಮುಂಚೆ ಹುದ್ದೆಯಿಂದ ವಜಾಗೊಂಡಿದ್ದ ಅಲೋಕ್​ ವರ್ಮಾ ಯಾವುದೇ ನಿರ್ಧಾರ ಕೈಗೊಳ್ಳದಂತೆ, ತನಿಖೆ ನಡೆಸದಂತೆ ಸೂಚನೆ ನೀಡಲಾಗಿತ್ತು. ಈಗ ತೀರ್ಪಿನ ಬಳಿಕವೂ ಅದೇ ಸ್ಥಿತಿ ಸಿಬಿಐ ಮುಖ್ಯಸ್ಥರದು ಎಂದು ಕಾಂಗ್ರೆಸ್​ ವಕ್ತಾರ ಅಭಿಷೇಕ್​ ಸಿಂಘ್ವಿ ಟ್ವೀಟ್​ ಮಾಡಿದ್ದಾರೆ”

ಸುಪ್ರೀಂ ಕೋರ್ಟ್​ ಆದೇಶ ಉಲ್ಲಂಘಿಸಿ ಕಾನೂನುಬಾಹಿರ ತೀರ್ಮಾನ ಕೈಗೊಂಡ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಕಾಂಗ್ರೆಸ್​ ನಾಯಕ ರಂದೀಪ್​ ಸಿಂಗ್​ ಸುರ್ಜೆವಾಲ ಟ್ವೀಟ್​ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ